4ನೇ ಟೆಸ್ಟ್: ಭಾರತ 273 ರನ್‌ಗೆ ಆಲೌಟ್

Update: 2018-08-31 17:39 GMT

 ಸೌಥಾಂಪ್ಟನ್, ಆ.31: ಚೇತೇಶ್ವರ ಪೂಜಾರ ಅವರ ಏಕಾಂಗಿ ಹೋರಾಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 273 ರನ್‌ಗೆ ಆಲೌಟಾಗಿದೆ. 27 ರನ್ ಅಲ್ಪ ಮುನ್ನಡೆ ಪಡೆದುಕೊಂಡಿದೆ.

ಎರಡನೇ ದಿನವಾದ ಶುಕ್ರವಾರ ವಿಕೆಟ್ ನಷ್ಟವಿಲ್ಲದೆ 19 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ 84.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತು. ಪೂಜಾರ ಶತಕ ದಾಖಲಿಸಿ(132, 257 ಎಸೆತ, 16 ಬೌಂಡರಿ) ತಂಡಕ್ಕೆ ಆಸರೆಯಾದರು. ಪೂಜಾರಗೆ ನಾಯಕ ಕೊಹ್ಲಿ(46)ಹೊರತುಪಡಿಸಿ ಬೇರೆ ಯಾವ ದಾಂಡಿಗರು ಉತ್ತಮ ಸಾಥ್ ನೀಡಲಿಲ್ಲ.

ಭಾರತ 195 ರನ್‌ಗೆ 8 ವಿಕೆಟ್ ಕಳೆದುಕೊಂಡಿತ್ತು. ಆಗ ಬಾಲಂಗೋಚಿಗಳಾದ ಇಶಾಂತ್ ಶರ್ಮಾ(14) ಅವರೊಂದಿಗೆ 9ನೇ ವಿಕೆಟ್‌ಗೆ 32 ರನ್ ಹಾಗೂ ಜಸ್‌ಪ್ರಿತ್ ಬುಮ್ರಾ(6) ಅವರೊಂದಿಗೆ ಕೊನೆಯ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದ ಪೂಜಾರ ತಂಡ 273 ರನ್ ಗಳಿಸಲು ನೆರವಾದರು.

 ಆರಂಭಿಕ ಆಟಗಾರರಾದ ಶಿಖರ್ ಧವನ್(23) ಹಾಗೂ ಕೆಎಲ್ ರಾಹುಲ್(19) ಮೊದಲ ವಿಕೆಟ್‌ಗೆ 37 ರನ್ ಗಳಿಸಿ ಸಾಧಾರಣ ಆರಂಭ ನೀಡಿದರು. ತಂಡ 50 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಆಗ 3ನೇ ವಿಕೆಟ್‌ಗೆ 92 ರನ್ ಸೇರಿಸಿದ ನಾಯಕ ವಿರಾಟ್ ಕೊಹ್ಲಿ(46, 71 ಎಸೆತ,6 ಬೌಂಡರಿ)ಹಾಗೂ ಚೇತೇಶ್ವರ ಪೂಜಾರ ತಂಡವನ್ನು ಆಧರಿಸಿದರು.

ನಾಯಕ ಕೊಹ್ಲಿ ಔಟಾದ ಬಳಿಕ ಭಾರತ ಕುಸಿತದ ಹಾದಿ ಹಿಡಿಯಿತು. ಉಪ ನಾಯಕ ಅಜಿಂಕ್ಯ ರಹಾನೆ(11), ರಿಷಬ್ ಪಂತ್(0), ಹಾರ್ದಿಕ್ ಪಾಂಡ್ಯ(4) ಹಾಗೂ ಆರ್.ಅಶ್ವಿನ್(1) ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಪಂತ್ 29 ಎಸೆತಗಳನ್ನು ಎದುರಿಸಿದರೂ ರನ್ ಖಾತೆ ತೆರೆಯಲು ಸಾಧ್ಯವಾಗದೇ ಅಲಿಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಮೊಯಿನ್ ಅಲಿ 63 ರನ್‌ಗೆ 5 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಟುವರ್ಟ್ ಬ್ರಾಡ್(3-63)ಆರಂಭಿಕ ಆಟಗಾರರನ್ನು ಬೇಗನೆ ಔಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News