ಸಾಕ್ಷ್ಯಾಧಾರಗಳು ಕಪೋಕಲ್ಪಿತ ಎನ್ನುವುದು ಪೊಲೀಸರಿಗೂ ಗೊತ್ತು: ರಾವ್ ಸೋದರ ಪುತ್ರ

Update: 2018-09-01 14:30 GMT

ಹೈದರಾಬಾದ್,ಸೆ.1: ಬಂಧಿತ ಮಾನವ ಹಕ್ಕು ಹೋರಾಟಗಾರರಿಗೂ ಮಾವೋವಾದಿಗಳಿಗೂ ಸಂಬಂಧ ಕಲ್ಪಿಸುವ ಮಹಾರಾಷ್ಟ್ರ ಪೊಲೀಸರ ‘ನಿರ್ಣಾಯಕ ಪುರಾವೆ’ ಮತ್ತು ಎಲ್ಲ ಸಾಕ್ಷಾಧಾರಗಳು ಕಪೋಲಕಲ್ಪಿತವಾಗಿವೆ ಎಂದು ಬಂಧಿತರಲ್ಲೊಬ್ಬರಾಗಿರುವ ತೆಲುಗು ಕವಿ ವರವರ ರಾವ್ ಅವರ ಸೋದರಪುತ್ರ ವೇಣುಗೋಪಾಲ ಅವರು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಪೊಲೀಸರ ಹೇಳಿಕೆಗಳಲ್ಲಿ ಹೊಸದೇನಿಲ್ಲ. ಇವೆಲ್ಲವನ್ನೂ ಕಳೆದ ಜೂನ್‌ನಲ್ಲಿಯೇ ಹೇಳಲಾಗಿತ್ತು. ಸೆ.6ರಂದು ಸಾಕ್ಷಾಧಾರಗಳನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವ ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವುದು ಅಕ್ರಮವಾಗುತ್ತದೆ. ವಿಷಯವು ವಿಚಾರಣಾಧೀನವಾಗಿರುವುದರಿಂದ ಅದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ ಎಂದ ಅವರು,ಪೊಲೀಸ್ ಅಧಿಕಾರಿಗಳಿಗೆ ಸುದ್ದಿಗೋಷ್ಠಿಯನ್ನು ನಡೆಸುವ ಹಕ್ಕು ಇಲ್ಲ ಎಂದರು.

ಶುಕ್ರವಾರ ಮುಂಬೈನಲ್ಲಿ ಮಾಧ್ಯಮಗಳಿಗೆ ವಿವರಗಳನ್ನು ನೀಡಿದ್ದ ಎಡಿಜಿಪಿ ಪರಮಬೀರ್ ಸಿಂಗ್ ಅವರು,ಜೂನ್‌ನಲ್ಲಿ ಮತ್ತು ಈ ವಾರ ಬಂಧಿಸಲ್ಪಟ್ಟಿರುವ ಎಡಪಂಥೀಯ ಕಾರ್ಯಕರ್ತರಿಗೂ ಮಾವೋವಾದಿಗಳಿಗೂ ಸಂಬಂಧವಿರುವ ಬಗ್ಗೆ ತಮ್ಮ ಬಳಿ ನಿರ್ಣಾಯಕ ಪುರಾವೆಯಿದೆ. ಬಂಧಿತರಲ್ಲೋರ್ವ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿಯವರನ್ನು ಮುಗಿಸುವ ಬಗ್ಗೆ ಮಾತನಾಡಿದ್ದ ಎಂದು ಹೇಳಿದ್ದರು.

ಸಾಕ್ಷ್ಯಾಧಾರಗಳು ಕಪೋಲಕಲ್ಪಿತ ಎನ್ನುವುದು ಪೊಲೀಸರಿಗೂ ಗೊತ್ತು. ಬಂಧಿತರ ಮಾನಹಾನಿಗೊಳಿಸಲು ಅವರು ಸುದ್ದಿಗೋಷ್ಠಿಯನ್ನು ಕರೆದಿದ್ದರು ಎಂದ ವೇಣುಗೋಪಾಲ,ಸರ್ವೋಚ್ಚ ನ್ಯಾಯಾಲಯವು ತನಗೆ ವಿವರಗಳನ್ನು ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿದೆಯೇ ಹೊರತು ಮಾಧ್ಯಮಗಳಿಗಲ್ಲ ಎಂದರು.

ಪೊಲೀಸರು ಉಲ್ಲೇಖಿಸಿರುವ ಸಾಕ್ಷಾಧಾರಗಳು ಕಪೋಲಕಲ್ಪಿತವಾಗಿದ್ದು, ರಾಜಕೀಯ ಪ್ರೇರಿತವಾಗಿವೆ ಎಂದು ಕಾಂಗ್ರೆಸ್,ಎನ್‌ಸಿಪಿ ಮತ್ತು ಶಿವಸೇನೆ ಜೂನ್‌ನಲ್ಲಿ ಹೇಳಿಕೆಗಳನ್ನು ನೀಡಿದ್ದವು ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News