ತೈಲಬೆಲೆ ಏರಿಕೆಗೆ ಅಮೆರಿಕದ ‘ಏಕಾಂಗಿ’ ನೀತಿ ಕಾರಣ: ಧರ್ಮೇಂದ್ರ ಪ್ರಧಾನ್

Update: 2018-09-01 14:35 GMT

ಭುವನೇಶ್ವರ, ಸೆ.1: ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಗಳ ಅಸಹಜ ಏರಿಕೆಗೆ ಅಮೆರಿಕದ ‘ಏಕಾಂಗಿ’ ನೀತಿಗಳು ಕಾರಣವೆಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಸತತ ಏರಿಕೆಯ ಬಗ್ಗೆ ಕೇಂದ್ರ ಸರಕಾರ ಆತಂಕಗೊಂಡಿದ್ದು, ಅವನ್ನು ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆಯೆಂದು ಅವರು ಹೇಳಿದರು.

 ಅಮೆರಿಕದ ಏಕಾಂಗಿ ನೀತಿಗಳಿಂದಾಗಿ ವಿಶ್ವದಾದ್ಯಂತ ಕರೆನ್ಸಿಗಳ ವೌಲ್ಯವು ಅಮೆರಿಕನ್ ಡಾಲರ್ ಎದುರು ಕುಸಿದಿದಿದೆ. ಭಾರತದ ಕರೆನ್ಸಿಯ ಮೇಲೂ ಇದು ಪರಿಣಾಮವನ್ನು ಬೀರಿದೆ ಮತ್ತು ತೈಲ ಬೆಲೆಯಲ್ಲಿ ಅಸಹಜ ಏರಿಕೆಯಾಗಿದೆ ಎಂದರು.

 ಬಾಹ್ಯ ಕಾರಣಗಳಿಂದಾಗಿ ತೈಲ ದರ ಹೆಚ್ಚಳ ಹಾಗೂ ರೂಪಾಯಿ ಅಪವೌಲ್ಯವಾಗಿದ್ದು, ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವುಂಟು ಮಾಡಿದೆಯೆಂದು ಪ್ರಧಾನ್ ತಿಳಿಸಿದರು. ಅಮೆರಿಕನ್‌ಡಾಲರ್ ಎದುರು ಭಾರತದ ರೂಪಾಯಿ ವೌಲ್ಯವು ಶುಕ್ರವಾರ 71 ರೂ. ಆಗಿದ್ದು ದಾಖಲೆಯ ಕುಸಿತವನ್ನು ಕಂಡಿದೆ. ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 78.68 ರೂ.ಆಗಿದ್ದು, 16 ಪೈಸೆ ಏರಿಕೆಯನ್ನು ಕಂಡಿದೆ ಹಾಗೂ ಡೀಸೆಲ್ ಲೀಟರ್‌ಗೆ 70.42 ರೂ.ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News