ಪಾಟ್ನಾದ ಆಶ್ರಯ ಧಾಮದಲ್ಲಿ ಮಹಿಳೆಯ ಸಾವು,ಇನ್ನಿಬ್ಬರು ನಾಪತ್ತೆ

Update: 2018-09-01 14:38 GMT

ಪಾಟ್ನಾ,ಸೆ.1: ಇಲ್ಲಿಯ ಮಾನಸಿಕ ಅಸ್ವಸ್ಥ ಮಹಿಳೆಯರ ಆಶ್ರಯಧಾಮದಲ್ಲಿ ವಾಸವಿದ್ದ 27ರ ಹರೆಯದ ಮಹಿಳೆಯೋರ್ವಳು ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಇದಕ್ಕೂ ಮುನ್ನ ಗುರುವಾರ ಇತರ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದರು.

 ಆಸರಾ ಆಶ್ರಯಧಾಮದ ನಿವಾಸಿ ಅನಾಮಿಕಾಳನ್ನು ಗುರುವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಉಸಿರಾಟದ ತೊಂದರೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಳು ಎಂದು ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧೀಕ್ಷಕ ರಾಜೀವ ರಂಜನ ಪ್ರಸಾದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇದೇ ಆಶ್ರಯ ಧಾಮದ 30ರ ಹರೆಯದ ಮಹಿಳೆಯರಿಬ್ಬರು ಗುರುವಾರದಿಂದ ನಾಪತ್ತೆಯಾಗಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಆಗಸ್ಟ್ 10ರಂದು ರಾತ್ರಿ ಆಶ್ರಮದ ಇಬ್ಬರು ಮಹಿಳೆಯರು ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಬಳಿಕ ಆಸರಾ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು. ಇದು ರಾಜ್ಯಾದ್ಯಂತ ಆಕ್ರೋಶ ಸೃಷ್ಟಿಸಿದ್ದು,ಆಸರಾವನ್ನು ನಡೆಸುತ್ತಿದ್ದ ಎನ್‌ಜಿಒದ ಸಂಚಾಲಕರಾದ ಮನೀಷಾ ದಯಾಳ್ ಮತ್ತು ಚಿರಂತನ ಕುಮಾರ ಅವರನ್ನು ಪೊಲಿಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಇಷ್ಟಾದ ಬಳಿಕ ಬಿಹಾರ ಸಮಾಜ ಕಲ್ಯಾಣ ಇಲಾಖೆಯು ಆಶ್ರಯ ಧಾಮದ ಉಸ್ತುವಾರಿಗಾಗಿ ತನ್ನ ಸಿಬ್ಬಂದಿಗಳನ್ನು ನೇಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News