ಪೊಲೀಸರು ನೀಡುತ್ತಿರುವ ಸಮರ್ಥನೆ ಹಾಸ್ಯಾಸ್ಪದ : ಶಿವಸೇನೆ

Update: 2018-09-03 15:17 GMT

ಮುಂಬೈ, ಸೆ. 3: ಕಳೆದ ವಾರ ಐವರು ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದಕ್ಕೆ ಶಿವಸೇನೆ ಸೋಮವಾರ ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಬಂಧನಕ್ಕೆ ಪೊಲೀಸರು ನೀಡುತ್ತಿರುವ ಸಮರ್ಥನೆ ಹಾಸ್ಯಾಸ್ಪದ. ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರಕಾರವನ್ನು ಆಯ್ಕೆ ಮಾಡಿರುವುದು ಹಾಗೂ ಪತನಗೊಳಿಸಿರುವುದು ಮತದಾರರು ಹೊರತು ಮಾವೋವಾದಿಗಳಲ್ಲ. ಪ್ರಜಾಪ್ರಭುತ್ವ ಪ್ರಕ್ರಿಯೆ ಮೂಲಕ ಸರಕಾರವನ್ನು ಬದಲಾಯಿಸುವ ಅವಕಾಶ ಇದೆ ಎಂದು ಸೇನೆ ಹೇಳಿದೆ.

ಪ್ರಸಕ್ತ ಸಂದರ್ಭ ರಾಜಕಾರಣಿಗಳು ಹಾಗೂ ಸರಕಾರ ವಿವಿಧ ಉದ್ದೇಶ ಗಳಿಗಾಗಿ ಪೊಲೀಸರನ್ನು ಬಳಸುವ ಸಂಪ್ರದಾಯ ಹೊಸದೇನೂ ಅಲ್ಲ. ಸತ್ಯ ಎಷ್ಟು ಬೇಗ ಹೊರಗೆ ಬರುತ್ತದೆಯೋ ಅಷ್ಟು ಉತ್ತಮ ಎಂದು ಶಿವಸೇನೆ ಹೇಳಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಭೀತಿ ರಹಿತ, ಧೈರ್ಯಶಾಲಿ ನಾಯಕರು. ಅವರ ಧೈರ್ಯವೇ ಅವರಿಗೆ ಮುಳುವಾಯಿತು. ಆದರೆ, ಮೋದಿ ಅಂತಹ ಯಾವುದೇ ಸಾಹಸದಲ್ಲಿ ತೊಡಗಿಕೊಂಡಿಲ್ಲ ಎಂದು ಶಿವಸೇನೆ ಹೇಳಿದೆ. ಪ್ರಧಾನಿ ಮೋದಿ ಅವರಿಗೆ ಜಗತ್ತಿನಲ್ಲೇ ಉತ್ತಮ ಭದ್ರತೆಯನ್ನು ಈಗಾಗಲೇ ನೀಡಲಾಗಿದೆ. ಒಂದೇ ಒಂದು ಹಕ್ಕಿ ಕೂಡ ಅವರ ಮೇಲೆ ಹಾರಾಡದು ಎಂದು ಸೇನೆ ಹೇಳಿದೆ.

ಪೊಲೀಸರ ಪ್ರತಿಪಾದನೆ ತಿರಸ್ಕರಿಸಿರುವ ಶಿವಸೇನೆ, ಒಂದು ವೇಳೆ ಈ ಮಾವೋವಾದಿಗಳು ರಾಜಕೀಯವಾಗಿ ಸಾಕಷ್ಟು ಪ್ರಬಲರಾಗಿದ್ದರೆ ಪಶ್ಚಿಮಬಂಗಾಳ, ತ್ರಿಪುರಾ ಹಾಗೂ ಮಣಿಪುರದಲ್ಲಿ ತಮ್ಮ ಸರಕಾರವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News