ಶ್ರೇಯಾಂಕರಹಿತ ಆಟಗಾರನಿಗೆ ಶರಣಾದ ಫೆಡರರ್!

Update: 2018-09-04 18:03 GMT

ನ್ಯೂಯಾರ್ಕ್, ಸೆ.4: ಎರಡನೇ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ ಯುಎಸ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಶ್ರೇಯಾಂಕರಹಿತ ಆಟಗಾರ ಜಾನ್ ಮಿಲ್ಮನ್ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಿಲ್ಮನ್ ಅವರು ಫೆಡರರ್ ವಿರುದ್ಧ 3-6, 7-5, 7-6(7), 7-6(3)ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಒಂದೂ ಸೆಟ್‌ನ್ನು ಕಳೆದುಕೊಳ್ಳದ ಫೆಡರರ್ 77 ಅನಗತ್ಯ ತಪ್ಪುಗಳು ಹಾಗೂ 10 ಡಬಲ್ ಫಾಲ್ಟ್ ಮಾಡಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.

 5 ಬಾರಿಯ ಚಾಂಪಿಯನ್ ಫೆಡರರ್ ಮೊದಲ ಸೆಟ್‌ನ್ನು 6-3 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, 3 ಗಂಟೆ, 34 ನಿಮಿಷಗಳ ಹೋರಾಟದಲ್ಲಿ ಎರಡನೇ ಸೆಟ್‌ನ್ನು ಗೆದ್ದುಕೊಂಡ ಮಿಲ್ಮನ್ ಎರಡು ಟೈ-ಬ್ರೇಕರ್ ಮೂಲಕ ಮೇಲುಗೈ ಸಾಧಿಸಿದರು.

2004ರಿಂದ 2008ರ ತನಕ ಸತತ 5 ಯುಎಸ್ ಓಪನ್ ಪ್ರಶಸ್ತಿಗಳನ್ನು ಜಯಿಸಿದ್ದ ಫೆಡರರ್ ತನ್ನ ಸರ್ವ್‌ನಲ್ಲಿ ಪರದಾಟ ನಡೆಸಿದ್ದು, ಅಂತಿಮ ಟೈ-ಬ್ರೇಕ್‌ನಲ್ಲಿ ಸತತ ಎರಡು ಬಾರಿ ಡಬಲ್ ಫಾಲ್ಟ್ ಮಾಡಿದರು.

ಫೆಡರರ್‌ಗೆ ಸೋಲಿನ ಕಹಿಉಣಿಸಿದ ಮಿಲ್ಮನ್ ಮುಂದಿನ ಸುತ್ತಿನಲ್ಲಿ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಕ್ವಾರ್ಟರ್ ಫೈನಲ್‌ಗೆ: ಇದೇ ವೇಳೆ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ನ ಜೊಯೊ ಸೌಸಾರನ್ನು 6-3, 6-4, 6-3 ಅಂತರದಿಂದ ಸೋಲಿಸಿದ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಯುಎಸ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಸತತ 11ನೇ ಜಯ ಸಾಧಿಸಿ ಉತ್ತಮ ದಾಖಲೆ ಕಾಯ್ದುಕೊಂಡರು.

ಟೂರ್ನಿಯಲ್ಲಿ ಪಾಬ್ಲೊ ಕರೆನೊ ಹಾಗೂ ಲುಕಾಸ್ ಪೌಲಿ ಅವರನ್ನು ಮಣಿಸಿದ್ದ ಸೌಸಾ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ತಲುಪಿದ ಪೋರ್ಚುಗಲ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದರು.

ಜಪಾನ್ ಆಟಗಾರ ಕಿ ನಿಶಿಕೊರಿ ಜರ್ಮನಿಯ ಫಿಲಿಪ್ ಕೊಹ್ಲ್ಸ್‌ಕ್ರೈಬರ್‌ರನ್ನು 6-3, 6-2, 7-5 ಅಂತರದಿಂದ ಮಣಿಸಿ ಯುಎಸ್ ಓಪನ್‌ನಲ್ಲಿ ಅಂತಿಮ-8ರ ಸುತ್ತು ತಲುಪಿದ್ದಾರೆ. 2014ರಲ್ಲಿ ಫೈನಲ್ ಹಾಗೂ 2016ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ನಿಶಿಕೊರಿ ಮುಂದಿನ ಸುತ್ತಿನಲ್ಲಿ ಕ್ರೊಯೇಶಿಯದ ಮರಿನ್ ಸಿಲಿಕ್‌ರನ್ನು ಎದುರಿಸಲಿದ್ದಾರೆ.

 ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮರಿನ್ ಸಿಲಿಕ್ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು 7-6(6), 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಯುಎಸ್ ಓಪನ್‌ನಲ್ಲಿ 5ನೇ ಬಾರಿ ಕ್ವಾರ್ಟರ್ ಫೈನಲ್‌ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News