ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ಜೂನಿಯರ್ ಶೂಟರ್‌ಗಳಿಗೆ ಕಂಚು

Update: 2018-09-05 18:21 GMT

ಚಾಂಗ್ವಾನ್, ಸೆ.5: ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ನಾಲ್ಕನೇ ದಿನವಾದ ಬುಧವಾರ 10 ಮೀ. ಏರ್ ರೈಫಲ್ ಟೀಮ್ ಜೂನಿಯರ್ ಇವೆಂಟ್‌ನಲ್ಲಿ ದಿವ್ಯಾಂಶು ಸಿಂಗ್ ಪನ್ವಾರ್ ಹಾಗೂ ಶ್ರೇಯಾ ಅಗರ್ವಾಲ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಆದರೆ, ಹಿರಿಯ ಶೂಟರ್‌ಗಳು ಗುರಿ ತಪ್ಪಿದ್ದಾರೆ.

  ದಿವ್ಯಾಂಶು ಹಾಗೂ ಶ್ರೇಯಾ 42 ತಂಡಗಳಿದ್ದ ಅರ್ಹತಾ ಸುತ್ತಿನಲ್ಲಿ 834.4 ಅಂಕ ಗಳಿಸಿ ಫೈನಲ್‌ಗೆ ತೇರ್ಗಡೆಯಾದರು. ಫೈನಲ್‌ನಲ್ಲಿ ಒಟ್ಟು 435 ಅಂಕ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಇಟಲಿಯ ಜೋಡಿ ಸೋಫಿಯಾ ಬೆನೆಟ್ಟಿ ಹಾಗೂ ಮಾರ್ಕೊ ಸುಪ್ಪಿನಿ ಚಿನ್ನ ಗೆದ್ದುಕೊಂಡರೆ, ಇರಾನ್‌ನ ಅರ್ಮಿನಾ ಹಾಗೂ ಮುಹಮ್ಮದ್ ಆಮಿರ್ ಬೆಳ್ಳಿ ಪದಕ ಜಯಿಸಿದ್ದಾರೆ. ಇದೇ ಇವೆಂಟ್‌ನಲ್ಲಿ ಭಾರತದ ಇಲವೆನಿಲ್ ವಲಾರಿಯನ್ ಹಾಗೂ ಹೃದಯ್ ಹಝಾರಿಕಾ 829.5 ಅಂಕ ಗಳಿಸಿ 13ನೇ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಐಎಸ್‌ಎಸ್‌ಎಫ್ ಟೂರ್ನಮೆಂಟ್‌ನ ನಾಲ್ಕು ದಿನಗಳಲ್ಲಿ ಭಾರತ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಸೀನಿಯರ್ ಶೂಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಚಾಂಪಿಯನ್‌ಶಿಪ್ 2020ರ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿದೆ.

 ಪುರುಷರ 50 ಮೀ.ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಚೈನ್ ಸಿಂಗ್ 623.9 ಅಂಕ ಗಳಿಸಿ 14ನೇ ಸ್ಥಾನ ಪಡೆದಿದ್ದಾರೆ. ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಂಜೀವ್ ರಾಜ್‌ಪೂತ್ (620)48ನೇ ಸ್ಥಾನ ಪಡೆದರು. ಸಿಂಗ್, ರಾಜ್‌ಪೂತ್ ಹಾಗೂ ಗಗನ್ ನಾರಂಗ್ ಅವರನ್ನೊಳಗೊಂಡ ಶೂಟಿಂಗ್ ಟೀಮ್ ಒಟ್ಟು 1856.1 ಅಂಕ ಗಳಿಸಿ 15ನೇ ಸ್ಥಾನ ಪಡೆದಿದೆ. ಮಹಿಳೆಯರ 50 ಮೀ. ರೈಫಲ್ ಪ್ರೋನ್‌ನಲ್ಲಿ ತೇಜಸ್ವಿನಿ ಸಾವಂತ್ 617.4 ಅಂಕ ಗಳಿಸಿ 28ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News