ವಿಹಾರಿ ಟೆಸ್ಟ್ ಕ್ರಿಕೆಟ್ ಪ್ರವೇಶ

Update: 2018-09-07 18:27 GMT

ಓವಲ್, ಸೆ.7: ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್‌ಗೆಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ಆಂಧ್ರ ಪ್ರದೇಶದ ಬಲಗೈ ದಾಂಡಿಗಹನುಮ ವಿಹಾರಿ ಅವರಿಗೆ ಇಂದು ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ ನೀಡಿದರು.

ವಿಹಾರಿ ಅವರು 19 ವರ್ಷಗಳ ಬಳಿಕ ಟೆಸ್ಟ್‌ಗೆಪಾದಾರ್ಪಣೆ ಮಾಡಿರುವ ಆಂಧ್ರ ಪ್ರದೇಶದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 24ರ ಹರೆಯದ ವಿಹಾರಿ ಭಾರತದ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಪಡೆದ 292ನೇ ಆಟಗಾರ. ಈಗಿನ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ 1999ರಲ್ಲಿ ಆಂಧ್ರದಿಂದ ಭಾರತದ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಕೊನೆಯ ಆಟಗಾರ ಎನ್ನುವುದು ವಿಶೇಷ.

ಇತ್ತೀಚಿನ ದಿನಗಳಲ್ಲಿ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕ ‘ಎ’ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ‘ಎ’ ತಂಡದ ಪರ 54 ರನ್, ಅಲೂರಿನಲ್ಲಿ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ 148 ರನ್ ಗಳಿಸಿದ್ದರು. ಹನುಮ ವಿಹಾರಿ 63 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 59.7 ಸರಾಸರಿಯಂತೆ 5,142 ರನ್ ದಾಖಲಿಸಿದ್ದಾರೆ. 15 ಶತಕ ಮತ್ತು 24 ಅರ್ಧಶತಕ ಗಳಿಸಿರುವ ವಿಹಾರಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 302 ರನ್. ಸ್ಪಿನ್ನರ್ ಆಗಿರುವ ಅವರು 19 ವಿಕೆಟ್‌ಗಳನ್ನು ಉಡಾಯಿಸಿದ್ದಾರೆ.

2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ ವಿಹಾರಿ 2 ಶತಕ, 3 ಅರ್ಧಶತಕ ಒಳಗೊಂಡ 94.00 ಸರಾಸರಿಯಲ್ಲಿ 752 ರನ್, 2017-18ರಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ 54.00 ಸರಾಸರಿಯಂತೆ ತಲಾ 1 ಶತಕ ಹಾಗೂ ಅರ್ಧಶತಕಗಳ ಸಹಿತ 378 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News