ಮನು ಅತ್ರಿ-ಸುಮೀತ್ ರೆಡ್ಡಿ ಕ್ವಾರ್ಟರ್ ಫೈನಲ್‌ಗೆ

Update: 2018-09-12 18:25 GMT

ಟೋಕಿಯೊ, ಸೆ.12: ಭಾರತದ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

 ಬುಧವಾರ ನಡೆದ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಮಲೇಶ್ಯಾದ ಗೋಹ್ ವಿ ಶೆಮ್ ಮತ್ತು ತ್ಯಾನ್ ವೀ ಕಿಯೊಂಗ್ ವಿರುದ್ಧ 15-21, 23-21, 21-19 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.

  ಕೇವಲ 54 ನಿಮಿಷಗಳಲ್ಲಿ ಗೋಹ್ ವಿ ಶೆಮ್ ಮತ್ತು ತ್ಯಾನ್ ವೀ ಕಿಯೊಂಗ್ ಸವಾಲನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ನಗೆ ಬೀರಿದರು.

 ರಾಷ್ಟ್ರೀಯ ಚಾಂಪಿಯನ್ ಮನು ಅತ್ರಿ ಮತ್ತು ಸುಮೀತ್ ಅವರು 2015ರಲ್ಲಿ ಮಲೇಶ್ಯನ್ ಜೋಡಿ ಗೋಹ್ ವಿ ಶೆಮ್ ಮತ್ತು ತ್ಯಾನ್ ವೀ ಕಿಯೊಂಗ್‌ರನ್ನು ಸೈಯದ್ ಮೋದಿ ಗ್ರಾನ್ ಪ್ರೀ ಗೋಲ್ಡ್‌ನಲ್ಲಿ ಮಣಿಸಿದ್ದರು.

ಮುಂದಿನ ಪಂದ್ಯದಲ್ಲಿ ಚೀನಾದ ಹೀ ಜಿಟ್ಟಿಂಗ್ ಮತ್ತು ತ್ಯಾನ್ ಕಿಯಾಂಗ್ ರನ್ನು ಮನು ಅತ್ರಿ ಮತ್ತು ಸುಮೀತ್ ಎದುರಿಸಲಿದ್ದಾರೆ.

    ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಜಪಾನ್‌ನ ಟಾಕೆಶಿ ಕುಮಾರ ಮತ್ತು ಕಿಯ್ಗಿ ಸೊನೊಡಾ ವಿರುದ್ಧ 12-21, 17-21 ಅಂತರದಲ್ಲಿ ಸೋಲು ಅನುಭವಿಸಿದರು. ಮಹಿಳೆಯರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ಕೊರಿಯಾದ ಚಾಂಗ್ ಯೆ ನಾ ಮತ್ತು ಜಂಗ್ ಕಿಯೊಂಗ್ ಯುನ್ ವಿರುದ್ಧ 17-21, 13-21 ಅಂತರದಲ್ಲಿ ಸೋಲು ಅನುಭವಿಸಿದರು.

ಒಲಿಂಪಿಕ್ ಪದಕ ಪಡೆದ ಮಹಿಳಾ ತಾರೆ ಪಿ.ವಿ.ಸಿಂಧು,ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಗುರುವಾರ ಆಡಲಿದ್ದಾರೆ.

 ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಚೀನಾದ ಗಾವೊ ಫಾಂಗ್‌ಜಿಯೊ ಮತ್ತು ಪ್ರಣಯ್ ಇಂಡೋನೇಶ್ಯದ ನಂ.10 ಅಂಟೋನಿ ಸಿನಿಸುಕಾ ಗಿಂಟಿಂಗ್‌ರನ್ನು ಎದುರಿಸುವರು. ನಂ.1 ಶ್ರೀಕಾಂತ್ ಹಾಂಕಾಂಗ್‌ನ ವಾಮಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು ಎದುರಿಸುವರು. ವಿನ್ಸೆಂಟ್ ಏಶ್ಯನ್ ಗೇಮ್ಸ್‌ನಲ್ಲಿ ಕಳೆದ ತಿಂಗಳು ಶ್ರೀಕಾಂತ್‌ಗೆ ಸೋಲುಣಿಸಿದ್ದರು.

ಮಿಶ್ರ ಡಬಲ್ಸ್ ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಮಲೇಶ್ಯಾದ ಚಾನ್ ಪೆಂಗ್ ಸೋನ್ ಮತ್ತು ಗೋಹ್ ಲಿಯು ಯಂಗ್‌ರನ್ನು ಎದುರಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News