ಉತ್ತಮ ಪ್ರದರ್ಶನ ನಿರೀಕ್ಷೆಯಲ್ಲಿ ಸಿಂಧು, ಶ್ರೀಕಾಂತ್

Update: 2018-09-17 18:29 GMT

ಚಾಂಗ್‌ಝೌ, ಸೆ.17: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕೆ.ಶ್ರೀಕಾಂತ್ ಮಂಗಳವಾರ ಇಲ್ಲಿ ಆರಂಭವಾಗಲಿರುವ ಚೀನಾ ಓಪನ್‌ನಲ್ಲಿ ಸೆಣಸಾಡಲಿದ್ದಾರೆ.

ಸಿಂಧು ಇತ್ತೀಚೆಗೆ ನಡೆದ ಜಪಾನ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಸೋತು ನಿರಾಸೆಗೊಳಿಸಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತ ಬಳಿಕ ಕಳಪೆ ಪ್ರದರ್ಶನ ನೀಡಿದ್ದರು.

   23ರ ಹರೆಯದ ಸಿಂಧು ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ವರ್ಷ ನಡೆದ ಪ್ರಮುಖ ಟೂರ್ನಿಗಳಾದ ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇಂಡಿಯ ಓಪನ್ ಹಾಗೂ ಥಾಯ್ಲೆಂಡ್ ಓಪನ್‌ನಲ್ಲಿ ಕೂಡ ಫೈನಲ್‌ಗೆ ತಲುಪಿದ್ದರು.

ಬಿಡುವಿಲ್ಲದ ಟೂರ್ನಿಯು ಸಿಂಧುಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಒಂದು ಟೂರ್ನಿಯಿಂದ ಮತ್ತೊಂದು ಟೂರ್ನಿಗೆ ಚೇತರಿಸಿಕೊಳ್ಳಲು ಸಮಾವಕಾಶ ಕೊರತೆಯಿದೆ.

ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸಿಂಧು 2016ರಲ್ಲಿ 70,000 ಡಾಲರ್ ಬಹುಮಾನ ಮೊತ್ತದ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ್ತಿಯ ಪೈಕಿ ಒಬ್ಬರಾಗಿರುವ ಸಿಂಧು ತನ್ನ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ಚೆಯುಂಗ್ ನಗನ್ ಯಿ ಅವರನ್ನು ಎದುರಿಸಲಿದ್ದಾರೆ.

ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಆದರೆ, ಜಪಾನ್ ಓಪನ್‌ನಿಂದ ಹೊರಗುಳಿದಿದ್ದರು. ಚೀನಾ ಓಪನ್‌ನಲ್ಲಿ ಭಾಗವಹಿಸಲಿರುವ ಸೈನಾ ಮೊದಲ ಸುತ್ತಿನಲ್ಲಿ ಕೊರಿಯಾದ ಸಂಗ್ ಜಿ-ಹಿಯುನ್‌ರನ್ನು ಎದುರಿಸಲಿದ್ದಾರೆ. ಸೈನಾ 2014ರಲ್ಲಿ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು. ಕಳೆದ ಋತುವಿನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದ ಕೆ.ಶ್ರೀಕಾಂತ್ ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್ ನ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ವರ್ಷ ಅವರ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಈ ವರ್ಷ ಕೆಲವೇ ಸಮಯ ನಂ.1 ಸ್ಥಾನದಲ್ಲಿದ್ದ ಶ್ರೀಕಾಂತ್ ಜಪಾನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಚೀನಾ ಓಪನ್‌ನಲ್ಲಿ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆ ವಿರುದ್ದ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ವಿಶ್ವ ಚಾಂಪಿಯನ್ ಕೆಂಟೊ ಮೊಮೊಟೊ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ಗೆ ಎದುರಾಗಲಿದ್ದಾರೆ. ಎಚ್‌ಎಸ್ ಪ್ರಣಯ್ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ, ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News