ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಭಾರೀ ಮಳೆ: ಇಬ್ಬರು ಮೃತ್ಯು

Update: 2018-09-24 13:52 GMT

ಚಂಡೀಗಢ, ಸೆ.24: ಸತತ ಮೂರನೇ ದಿನವೂ ಪಂಜಾಬ್, ಹರ್ಯಾಣ ಮತ್ತು ಚಂಡೀಗಢದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಪಂಜಾಬ್ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ.

ಪಂಜಾಬ್‌ನಲ್ಲಿ ಮನೆಯ ಛಾವಣಿ ಕುಸಿದುಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭತ್ತ ಮತ್ತು ಹತ್ತಿಯ ಬೆಳೆಗಳು ಕಟಾವಿಗೆ ಸಿದ್ಧಗೊಂಡಿರುವ ಸಂದರ್ಭದಲ್ಲಿ ಸುರಿದಿರುವ ಅಕಾಲಿಕ ಭಾರೀ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನೆರೆಯ ರಾಜ್ಯಗಳಾದ ಹಿಮಾಚಲಪ್ರದೇಶ ಮತ್ತು ಉತ್ತರಾಖಂಡಗಳಲ್ಲಿಯೂ ಮಳೆ ಮುಂದುವರಿದಿದ್ದು ಈ ರಾಜ್ಯಗಳಿಂದ ಕೆಳಮುಖವಾಗಿ ಹರಿದುಬಂದು ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಹರಿಯುವ ಸಟ್ಲೇಜ್, ಬಿಯಾಸ್, ರಾವಿ ಹಾಗೂ ಯಮುನಾ ನದಿಗಳ ಪಾತ್ರದಲ್ಲಿರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರವಿವಾರ ಅಮೃತಸರದಲ್ಲಿ 145 ಮಿ.ಮೀ.ಗೂ ಹೆಚ್ಚಿನ ಮಳೆ ಸುರಿದಿದೆ. ಅಲ್ಲದೆ ನಗರದ ತಾಪಮಾನ 23 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿದೆ. ಸ್ವರ್ಣ ಮಂದಿರ ಸಮುಚ್ಚಯದ ಸುತ್ತಮುತ್ತ ನೀರು ತುಂಬಿದ್ದು ಮಂದಿರವನ್ನು ಸಂದರ್ಶಿಸಲು ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ಅನಾನುಕೂಲವಾಗಿದೆ.

ಎರಡೂ ರಾಜ್ಯಗಳ ಹಲವೆಡೆ ರಸ್ತೆ ಸಂಚಾರಕ್ಕೆ ಧಕ್ಕೆಯಾಗಿದೆ. ಪಂಜಾಬ್‌ನ ನವನ್‌ಶಹರ್ ಜಿಲ್ಲೆಯಲ್ಲಿ ಮನೆಯ ಛಾವಣಿ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಈ ಮಧ್ಯೆ, ಪಂಜಾಬ್ ಸರಕಾರ ರಾಜ್ಯದಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದು, ಗರಿಷ್ಠ ಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಪತ್ತು ನಿರ್ವಹಣೆಗೆ ನಿಯಂತ್ರಣಾ ಕೊಠಡಿಗಳನ್ನೂ ತೆರೆಯಲಾಗಿದೆ. ಸೇನೆಯ ನೆರವನ್ನೂ ಕೋರಲಾಗಿದ್ದು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಸೂಕ್ತ ಯೋಜನೆಗಳನ್ನು ರೂಪಿಸಲಾಗಿದೆ. ನೀರಿಂಗಿಸುವ ಯಂತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳೂ ಸೂಚಿಸಲಾಗಿದೆ. ಮೂರು ನದಿಗಳ ಜಲಾಯನ ಪ್ರದೇಶದ ವ್ಯಾಪ್ತಿಯಲ್ಲಿ ಜೀವರಕ್ಷಕ ಬೋಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News