ದಿಲ್ಲಿಯ ಐಷಾರಮಿ ತಾಜ್ ಮಾನ್‌ಸಿಂಗ್ ಹೊಟೇಲ್ ಟಾಟಾ ತೆಕ್ಕೆಗೆ

Update: 2018-09-28 15:46 GMT

ಹೊಸದಿಲ್ಲಿ, ಸೆ. 27: ವರ್ಷಗಳ ವ್ಯಾಜ್ಯದ ಬಳಿಕ ಶುಕ್ರವಾರ ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಹರಾಜು ಹಾಕಿದ ದಿಲ್ಲಿಯ ಲುಟ್ಯೆನ್ಸ್‌ನಲ್ಲಿರುವ ಐಷಾರಾಮಿ ತಾಜ್ ಮಾನ್‌ಸಿಂಗ್ ಹೊಟೇಲ್ ಅನ್ನು ಟಾಟಾ ಸಮೂಹದ ತೆಕ್ಕೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ಆರಂಭವಾಗಿ 4 ಗಂಟೆಗೆ ಪೂರ್ಣಗೊಂಡ ಹೊಟೇಲ್‌ನ ಹರಾಜಿನಲ್ಲಿ ಟಾಟಾ ಸಮೂಹ ತನ್ನ ಪ್ರತಿಸ್ಪರ್ಧಿ ಐಟಿಸಿ ಸಮೂಹವನ್ನು ಸೋಲಿಸಿ ತಾಜ್ ಮಾನ್‌ಸಿಂಗ್ ಹೊಟೇಲ್ ಅನ್ನು ತನ್ನದಾಗಿಸಿಕೊಂಡಿತು. 2011ರಲ್ಲಿ ಲೀಸ್ ಮುಗಿದ ಬಳಿಕ ಹರಾಜು ಬಾಕಿ ಉಳಿದಿತ್ತು. ಟಾಟಾ ಸಮೂಹ ಲೀಸನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಹೊಟೇಲ್ ಅನ್ನು ನಿರ್ವಹಿಸುತ್ತಿತ್ತು. ದ್ವಿಗುಣ ಪರವಾನಿಗೆ ಶುಲ್ಕದಲ್ಲಿ 33 ವರ್ಷಗಳ ಹಿಂದೆ ಹೊಟೇಲ್ ಅನ್ನು ಟಾಟಾ ಸಮೂಹಕ್ಕೆ ನೀಡಲಾಗಿತ್ತು.

ಜಿಎಸ್‌ಟಿ ಸೇರಿದಂತೆ ತಿಂಗಳಿಗೆ 7.03 ಕೋಟಿ ರೂ. ಪರವಾನಿಗೆ ಶುಲ್ಕ ಪಾವತಿಸಿ ಟಾಟಾ ಗ್ರೂಪ್ಸ್ ಇಂಡಿಯನ್ ಹೊಟೇಲ್ಸ್ ಲಿಮಿಟೆಡ್ (ಐಎಚ್‌ಸಿಎಲ್) ಹೊಟೇಲ್ ಅನ್ನು ಉಳಿಸಿಕೊಂಡಿತ್ತು. ಈ ಹಿಂದೆ ಸುಮಾರು ತಿಂಗಳಿಗೆ 3.94 ಕೋ. ರೂ. ಪರವಾನಿಗೆ ಶುಲ್ಕ ಪಾವತಿಸುತ್ತಿತ್ತು ಎಂದು ಎನ್‌ಡಿಎಂಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಐಷಾರಾಮಿ ಹೊಟೇಲ್ ಅನ್ನು ಹರಾಜು ಹಾಕಲು ಎರಡು ಬಾರಿ ವಿಫಲವಾದ ಎನ್‌ಡಿಎಂಸಿ ಬಿಡ್ಡರ್‌ಗಳ ಅರ್ಹತಾ ಮಾನದಂಡಕ್ಕೆ ವಿನಾಯಿತಿ ನೀಡಲು ಹಾಗೂ ಅಗತ್ಯದ ಬಿಡ್‌ಗಳನ್ನು ಕನಿಷ್ಠ ಸಂಖ್ಯೆಗೆ ಇಳಿಸುವ ನಿರ್ಧಾರ ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News