​ಕಣ್ಣೂರು ವಿಮಾನ ನಿಲ್ದಾಣ ವಾಣಿಜ್ಯ ಬಳಕೆಗೆ ಸಜ್ಜು

Update: 2018-09-30 03:44 GMT

ತಿರುವನಂತಪುರಂ, ಸೆ. 30: ಕಣ್ಣೂರು ವಿಮಾನ ನಿಲ್ದಾಣ ಈ ವರ್ಷ ವಾಣಿಜ್ಯ ಬಳಕೆಗೆ ಸಿದ್ಧವಾಗಲಿದ್ದು, 11 ಅಂತಾರಾಷ್ಟ್ರೀಯ ವಿಮಾನಯಾನ ಕಂಪೆನಿಗಳು ಸೇರಿದಂತೆ ಒಟ್ಟು 17 ಏರ್‌ಲೈನ್ಸ್‌ಗಳು ಇಲ್ಲಿಂದ ಕಾರ್ಯಾಚರಣೆ ಆರಂಭಿಸಲು ಮುಂದಾಗಿವೆ.

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿವರ ನೀಡಿದರು.

ನಿರ್ಮಾಣ ಕಾರ್ಯದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. ರನ್‌ವೇ ಮತ್ತು ಏರ್‌ಸೈಡ್ ಕಾಮಗಾರಿ 694 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ. ಟರ್ಮಿನಲ್ ಕಟ್ಟಡ, ಮೆಟಲ್ ಡಿಟೆಕ್ಟರ್, ಬ್ಯಾಗೇಜ್ ನಿರ್ವಹಣೆ ವ್ಯವಸ್ಥೆ, ಚೆಕ್ ಇನ್ ಕೌಂಟರ್, ಎಮಿಗ್ರೇಶನ್ ಚೆಕ್‌ಪಾಯಿಂಟ್, ಲಿಫ್ಟ್, ಎಸ್ಕಲೇಟರ್ ಮತ್ತು ಪ್ರಯಾಣಿಕರ ವಿಮಾನ ಏರುವ ಸೇತುವೆ ಕಾಮಗಾರಿಗಳು 498 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿವೆ ಎಂದು ವಿವರಿಸಿದರು.

ಎಮಿರೇಟ್ಸ್, ಇತಿಹಾದ್, ಫ್ಲೈ ದುಬೈ, ಏರ್ ಅರೇಬಿಯಾ, ಒಮನ್ ಏರ್, ಕತಾರ್ ಏರ್‌ವೇಸ್, ಗಲ್ಫ್ ಏರ್, ಸೌದಿಯಾ, ಸಿಲ್ಕ್ ಏರ್, ಏರ್ ಏಷ್ಯಾ, ಮಲಿಂದೊ ಏರ್, ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಜೆಟ್ ಏರ್‌ವೇಸ್, ಇಂಡಿಗೊ, ಸ್ಪೈಸ್ ಜೆಟ್ ಹಾಗೂ ಗೋ ಏರ್ ಈಗಾಗಲೇ ವಿಮಾನಗಳನ್ನು ಆರಂಭಿಸಲು ಒಪ್ಪಿಕೊಂಡಿವೆ ಎಂದು ಹೇಳಿದರು.

ವಿಮಾನ ನಿಲ್ದಾಣದ ಭದ್ರತೆಗಾಗಿ 613 ಮಂದಿ ಸಿಐಎಸ್‌ಎಫ್ ಸಿಬ್ಬಂದಿ ನಿಯೋಜಿತರಾಗಿದ್ದು, ಅಕ್ಟೋಬರ್ 1ರಂದು ಇವರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಎಮಿಗ್ರೇಶನ್ ಕ್ಲಿಯರೆನ್ಸ್‌ಗೆ ರಾಜ್ಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News