ಮಹಾತ್ಮಾ ಗಾಂಧಿ ಬಿಜೆಪಿಯ ಪಾಲಿಗೆ ‘ಹಿರಿಯ ಸ್ವಚ್ಛತಾ ನಿರೀಕ್ಷಕ’: ಹಬೀಬ್
ಹೊಸದಿಲ್ಲಿ,ಅ.2: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನ್ನ ಸ್ವಚ್ಛ ಭಾರತ ಅಭಿಯಾನಕ್ಕೆ ಒತ್ತು ನೀಡಲು ಮಹಾತ್ಮಾ ಗಾಂಧಿಯವರ ವರ್ಚಸ್ಸನ್ನು ‘ಹಿರಿಯ ಸ್ವಚ್ಛತಾ ನಿರೀಕ್ಷಕ’ನ ಮಟ್ಟಕ್ಕೆ ಇಳಿಸಿದೆ ಎಂದು ಖ್ಯಾತ ಇತಿಹಾಸ ತಜ್ಞ ಇರ್ಫಾನ್ ಹಬೀಬ್ ಅವರು ಆರೋಪಿಸಿದ್ದಾರೆ.
ಮಹಾತ್ಮಾ ಗಾಂಧೀಜಿಯವರ 149ನೇ ಜಯಂತಿಯ ಅಂಗವಾಗಿ ಸೋಮವಾರ ಇಲ್ಲಿ ಸಹಮತ್ ಆಯೋಜಿಸಿದ್ದ ಇತಿಹಾಸತಜ್ಞರು,ವಿದ್ವಾಂಸರು,ವಿದ್ಯಾರ್ಥಿಗಳು ಮತ್ತು ಇತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಬೀಬ್(87) ಅವರು,ಇಂದು ಬಿಜೆಪಿ ಸರಕಾರವು ರಾಷ್ಟ್ರಪಿತನನ್ನು ‘ಸೀನಿಯರ್ ಸ್ಯಾನಿಟರಿ ಇನ್ಸ್‌ಪೆಕ್ಟರ್’ಎಂದು ಪರಿಗಣಿಸುತ್ತಿದೆ. ನಾವು ಅವರನ್ನು ರಾಷ್ಟ್ರಪಿತರನ್ನಾಗಿಸಿಯೇ ಕಾರ್ಯಕ್ರಮಗಳನ್ನು ಆಚರಿಸಬೇಕು ಎಂದು ಸ್ವಚ್ಛ ಭಾರತ ಅಭಿಯಾನದಲ್ಲಿ ಗಾಂಧೀಜಿಯವರ ಚಿತ್ರದ ಬಳಕೆಯನ್ನು ಪ್ರಸ್ತಾಪಿಸಿ ಹೇಳಿದರು.
ರಾಷ್ಟ್ರೀಯ ವಾದ ಮತ್ತು ಮಹಾತ್ಮಾ ಗಾಂಧಿಯವರ ಕುರಿತು ಪ್ರಖರ ಭಾಷಣ ಮಾಡಿದ ‘ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ’ದ ಲೇಖಕರಾಗಿರುವ ಹಬೀಬ್,ರಾಷ್ಟ್ರದ ಪರಿಕಲ್ಪನೆಯು ದೇಶದ ಪರಿಕಲ್ಪನೆಗಿಂತ ಭಿನ್ನವಾಗಿದೆ. ದೇಶವೊಂದನ್ನು ರಾಜಕೀಯ ಸಂಸ್ಥೆಯನ್ನಾಗಿ ಸಂಘಟಿಸಲು ಗಂಭೀರ ಪ್ರಯತ್ನಗಳು ನಡೆದಾಗ ಅದು ರಾಷ್ಟ್ರವಾಗುತ್ತದೆ. ಭಾರತವು ತನ್ನ ರಾಷ್ಟ್ರೀಯ ವಾದವನ್ನು ಸ್ವಾತಂತ್ರ ಹೋರಾಟದಿಂದ ಕಲಿತುಕೊಂಡಿದೆಯೇ ಹೊರತು ಕೆಲವು ಬಲಪಂಥೀಯ ಸಂಘಟನೆಗಳು ನಮ್ಮನ್ನು ನಂಬಿಸುತ್ತಿರುವಂತೆ ಕೆಲವು ಪ್ರಾಚೀನ ಗ್ರಂಥಗಳಿಂದಲ್ಲ ಎಂದರು.