ಪತ್ರಕರ್ತನ ಮೇಲೆ ಹಲ್ಲೆ: ನಾಲ್ವರ ಬಂಧನ

Update: 2018-10-15 14:15 GMT

ಮುಂಬೈ,ಅ.15: ದೃಶ್ಯ ಮಾಧ್ಯಮ ಪತ್ರಕರ್ತ ಮತ್ತು ಅವರ ಗೆಳೆಯನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮುಂಬೈ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬಂಧಿತರೆಲ್ಲರೂ ನಗರ ಪ್ರದೇಶದ ನಿವಾಸಿಗಳಾಗಿದ್ದು 20ರಿಂದ 25ರ ಹರೆಯದ ಒಳಗಿನ ಯುವಕರಾಗಿದ್ದಾರೆ. ಇವರನ್ನು ರವಿವಾರ ರಾತ್ರಿ ಟಾರ್ಡಿಯೊ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈಮ್ಸ್ ನೌ ಸುದ್ದಿ ಮಾಧ್ಯಮದ ಉದ್ಯೋಗಿ ಹರ್ಮನ್ ಗೋಮ್ಸ್ ಮತ್ತವರ ಸ್ನೇಹಿತನ ಮೇಲೆ ಶನಿವಾರ ರಾತ್ರಿ ಆರೋಪಿಗಳು ಹಲ್ಲೆ ನಡೆಸಿದ್ದರು. ಗೋಮ್ಸ್ ಮತ್ತವರ ಗೆಳೆಯ ಶನಿವಾರ ರಾತ್ರಿ ಸುಮಾರು 1.30ರ ಸುಮಾರಿಗೆ ತನ್ನ ಮನೆಯ ಸಮೀಪ ಕಾರಿನಿಂದ ಇಳಿಯುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ದುಷ್ಕರ್ಮಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸಹಾಯಕ ಪೊಲೀಸ್ ಆಯುಕ್ತ (ವಲಯ 2) ಧ್ಯಾನೇಶ್ವರ ಚವಾಣ್, ಎರಡು ಗುಂಪುಗಳ ಮಧ್ಯೆ ನಡೆದ ವಾದದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿರಬಹುದು ಎಂದು ಅಭಿಪ್ರಾಯಿಸಿದ್ದಾರೆ. ಬಂಧಿತ ಆರೋಪಿಗಳು ಯಾವುದೇ ಅಪರಾಧಿ ಹಿನ್ನೆಲೆಯನ್ನು ಹೊಂದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಗೋಮ್ಸ್ ಮೇಲಿನ ಹಲ್ಲೆಯನ್ನು ಖಂಡಿಸಿರುವ ಮುಂಬೈ ಪ್ರೆಸ್ ಕ್ಲಬ್, ಹಲ್ಲೆಯ ಕುರಿತ ದೂರನ್ನು ಆರಂಭದಲ್ಲಿ ಸ್ವೀಕರಿಸಲು ನಿರಾಕರಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಇತ್ತೀಚೆಗೆ ಹಿಂದೂ ಸಂಘಟನೆಯ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಕಾರಣಕ್ಕೆ ಇಂಡಿಯಾ ಟುಡೆ ಸುದ್ದಿ ಸಂಸ್ಥೆಯ ಪತ್ರಕರ್ತರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಬಲಪಂಥೀಯ ಸಂಘಟನೆಗಳು ಈ ಪತ್ರಕರ್ತರನ್ನು ಉಗ್ರರು ಎಂದು ಸಂಭೋದಿಸಿತ್ತು. ಇಂಥ ಘಟನೆಗಳು ನಡೆಯದಂತೆ ತಡೆಯಬೇಕಾಗಿದೆ ಎಂದು ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ ಲತಾ ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News