ನಮ್ಮನ್ನಗಲಿದ ದಿವ್ಯ ಚೇತನ ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್: ರಿಯಾಝ್ ಹರೆಕಳ

Update: 2018-10-21 04:35 GMT

ಪಿ.ಬಿ ಅಬ್ದುಲ್ ರಝಾಕ್ ಅವರು ಶಾಸಕರು ಮಾತ್ರವಾಗಿರಲಿಲ್ಲ, ಸಹನೆಯ ವಾತ್ಸಲ್ಯ ಮೂರ್ತಿಯಾಗಿದ್ದರು. ಪುಟ್ಟ ಮಕ್ಕಳನ್ನು ಸಮೇತ ಬಹುವಚನದಿಂದ ಸಂಬೋಧಿಸುವ ಪಿ.ಬಿ.ಅಬ್ದುಲ್ ರಝಾಕ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರತಿಯೋರ್ವರ ಅಚ್ಚುಮೆಚ್ಚಿನ 'ರದ್ದುಚ್ಚ' ಆಗಿದ್ದರು ಎಂದು ರಿಯಾಝ್ ಹರೆಕಳ ತಮ್ಮ ಅನುಭವವನ್ನು ಮೆಲುಕು ಹಾಕುತ್ತಾರೆ.

ಅವರು ಕನ್ನಡ ಪ್ರೇಮಿಯಾಗಿದ್ದರು. ಮಂಗಳೂರು ಜನತೆಯ ಜೊತೆಯಲ್ಲಿ ಉತ್ತಮ ನಂಟು ಹೊಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ ಪರವಾಗಿ ಪ್ರಚಾರಕ್ಕೆ ಬಂದಿದ್ದರು. ಮಂಗಳೂರು ಮತ್ತು ಮಂಜೇಶ್ವರ ಕ್ಷೇತ್ರದ ಜನತೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪಿ.ಬಿ.ಅಬ್ದುಲ್ ರಝಾಕ್ ಅದೇಷ್ಟೋ ಮಂದಿ ಬಡವರ, ರೋಗಿಗಳ, ಅಶಕ್ತರ ಕಣ್ಣೀರೊರೆಸಿದವರು. ಚೆಂಗಳ ಗ್ರಾ.ಪಂ. ಅಧ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಎರಡು ಬಾರಿ ಮಂಜೇಶ್ವರ ಶಾಸಕರಾಗಿ ಆಯ್ಕೆಯಾಗಿ ಎಲ್ಲರ ಸಂಪ್ರೀತಿಗಳಿಸಿ, ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿದ್ದರು.

ನಗುವನ್ನೇ ಬಂಡವಾಳವನ್ನಾಗಿಸಿಕೊಂಡ ಪಿ.ಬಿ.ಅಬ್ದುಲ್ ರಝಾಕ್ ಅವರು ಮುನಿಸಿಕೊಂಡಿದ್ದನ್ನು ಯಾರೂ ಕಂಡವರೇ ಇಲ್ಲ. ತನ್ನ ಹಾಸ್ಯ ಮಿಶ್ರಿತ ಮಾತುಗಳಿಂದ ಎಲ್ಲರನ್ನು ತನ್ನತ್ತ ಗಮನ ಸೆಳೆಯುತ್ತಾ, ಯಾವುದೇ ರಾಜಕೀಯ ದ್ವೇಷ ಹೊಂದದೆ, ಎಲ್ಲರ ಪಾಲಿನ ಸ್ನೇಹಗಳಿಸಿದ್ದು, ದ್ವೇಷ ರಾಜಕಾರಣವನ್ನು ಅವರು ಯಾವತ್ತೂ ಬಯಸಿದವರಲ್ಲ. ತನ್ನ ಬಳಿಗೆ ಬರುವ ಯಾರೇ ಆಗಲಿ ಅವರ ಅಹವಾಲನ್ನು ಕೇಳಿ ಅದಕ್ಕೆ ಪರಿಹಾರ ಕಾಣುವ ಸಜ್ಜನ ಮನುಷ್ಯರಾಗಿದ್ದರು.

ಅವರು ಕೇರಳದ ತುತ್ತತುದಿಯ ಮಂಜೇಶ್ವರ ಕ್ಷೇತ್ರದಲ್ಲಿ ಜಾತ್ಯಾತೀತತೆಯ ಧ್ವಜವನ್ನು ಹಾರಿಸಿದ ಮೇಧಾವಿ. ಮಂಜೇಶ್ವರ ಮೀನುಗಾರಿಕಾ ಬಂದರು, ಮಲೆನಾಡು ಹೆದ್ದಾರಿ, ಅತ್ಯಾಧುನಿಕ ಮಾದರಿಯ ರಸ್ತೆಗಳು, ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಉರ್ದು ಅಕಾಡಮಿ, ಮಾಪಿಳ್ಳಪಾಟ್ಟು ಅಕಾಡೆಮಿ ಸ್ಥಾಪನೆ, ಗೋವಿಂದ ಪೈ ಸ್ಮಾರಕ ಅಭಿವೃದ್ಧಿ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ಸಾಧನೆಗಳು. ತನ್ನ ಕಾಲಾವಧಿಯಲ್ಲಿ 1000 ಕೋ.ರೂ.ಮಿಕ್ಕಿದ ಯೋಜನೆಗಳನ್ನು ಜಾರಿಗೊಳಿಸಿ, ಮಂಜೇಶ್ವರ ಕ್ಷೇತ್ರವನ್ನು ಬೆಳಗಿಸಿದರು. ಮಂಜೇಶ್ವರ ಕ್ಷೇತ್ರದ ಮೂಲೆ ಮೂಲೆಗಳಿಗೂ ರಸ್ತೆ, ಕಾಂಕ್ರಿಟ್ ರಸ್ತೆಯ ಕೊಡುಗೆ ನೀಡಿದವರು. ತನ್ನ ಬಳಿಗೆ ಸಹಾಯಹಸ್ತ ಚಾಚಿ ಬರುವವರನ್ನು ಯಾವತ್ತೂ ಬರಿಗೈಯ್ಯಲ್ಲಿ ಕಳುಹಿಸಿದವರೇ ಅಲ್ಲ ಈ ರದ್ದುಚ್ಚ.

ತನಗೆ ಸಿಗುವ ಸಂಬಳವನ್ನು ಬಡವರಿಗಾಗಿಯೇ ಘೋಷಿಸಿ ಹಂಚುತ್ತಿದ್ದ ಅಪಾರ ಮನುಷ್ಯ ಸ್ನೇಹಿ. ಬಡ ಕುಟುಂಬದ ಹೆಣ್ಮಕ್ಕಳ ವಿವಾಹಕ್ಕಾಗಿ ಅದೆಷ್ಟೋ ನೆರವಾದವರು. ಮಂಜೇಶ್ವರ ಕ್ಷೇತ್ರದ ಹಲವು ಕ್ಯಾನ್ಸರ್ ರೋಗಿಗಳಿಗೆ, ಹೃದ್ರೋಗಿಗಳಿಗೆ, ಕಿಡ್ನಿ ವೈಫಲ್ಯಕ್ಕೊಳಗಾದವರಿಗೆ ಮುಖ್ಯಮಂತ್ರಿ ಚಿಕಿತ್ಸಾ ನಿಧಿಯಿಂದ ಹಣಕಾಸಿನ ನೆರವು ಒದಗಿಸಿಕೊಡುವ ಮೂಲಕ ಸಾಂತ್ವನದ ನೆರಳಾದವರು. ಅದೆಷ್ಟೋ ಮಂದಿಗೆ ತನ್ನ ಸ್ವಂತ ಜೇಬಿನಿಂದ ಸಹಾಯಧನ ನೀಡಿದವರು. ಜೀವಕಾರುಣ್ಯದ ಜೀವಸ್ಪರ್ಶವಾಗಿದ್ದ ಪಿ.ಬಿ ಅಬ್ದುಲ್ ರಝಾಕ್ ಬಡವರ ಕಣ್ಣೀರೊರೆಸಿದ ಕರುಣಾಮಯಿ.

ತನಗೆ ಅಸೌಖ್ಯವಿದ್ದರೂ,  ಕ್ಷೇತ್ರದ ಜನತೆಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಮಾನವ ಸ್ನೇಹಿ. ಶಾಸಕನೆಂಬ ಅಹಂ ಇಲ್ಲದ ಅಪರೂಪದ ವ್ಯಕ್ತಿತ್ವ ಅವರದ್ದು. ಮಲಯಾಳ ಶಾಲೆಯಲ್ಲಿ ಕಲಿತರೂ ''ನನಗೆ ವಿದ್ಯಾಭ್ಯಾಸವಿಲ್ಲದಿದ್ದರೂ, ಅಭ್ಯಾಸವಿದೆ'' ಎಂದು ಹೇಳುತ್ತಾ ಇಡೀ ಕ್ಷೇತ್ರದಲ್ಲಿ ಎಲ್ಲರನ್ನೂ ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡಿದ ಮಹಾನ್ ಸಾಧಕ. ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲದೇ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿ ಅಜಾತ ಶತ್ರವೆನಿಸಿದ್ದ ಪಿ.ಬಿ.ಅಬ್ದುಲ್ ರಝಾಕ್ ರವರ ನಿಧನ ನಾಡಿಗೆ ತುಂಬಲಾರದ ನಷ್ಟ. ನಾಡು ಓರ್ವ ಅಸಾಮಾನ್ಯ ವ್ಯಕ್ತಿತ್ವವನ್ನು ಕಳೆದುಕೊಂಡಿದೆ. ಇತ್ತೀಚೆಗೆ ಚೆರ್ಕಳಂ ಅಬ್ದುಲ್ಲ ಅವರನ್ನು ಅಗಲಿದ ಬಳಿಕ ಇದೀಗ ನಾವು ರದ್ದುಚ್ಚರನ್ನು ಕಳೆದುಕೊಂಡಿದ್ದೇವೆ. ಮಂಜೇಶ್ವರ ಕಂಡ ಧೀಮಂತ ಪುರುಷ ಅಗಲಿದ ಪಿ.ಬಿ.ಅಬ್ದುಲ್ ರಝಾಕ್ ರವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

- ರಿಯಾಝ್ ಹರೆಕಳ,

ಮುಸ್ಲಿಂ ಲೀಗ್ ಮುಖಂಡ, ದಕ್ಷಿಣ ಕನ್ನಡ ಜಿಲ್ಲೆ

ಸೋಷಿಯಲ್ ವೆಲ್ಫೇರ್ ಆಸೋಷಿಯೇಶನ್ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News