ಸಿಬಿಐ ಈಗ ‘ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಶನ್’: ಮಮತಾ ಬ್ಯಾನರ್ಜಿ ಟೀಕೆ
ಹೊಸದಿಲ್ಲಿ, ಅ.24: ದೇಶದ ಅತ್ಯುನ್ನತ ತನಿಖಾ ಏಜೆನ್ಸಿ ಸಿಬಿಐನ ಇಬ್ಬರು ಅತ್ಯುನ್ನತ ಅಧಿಕಾರಿಗಳನ್ನು ಹುದ್ದೆಯಿಂದ ಕೆಳಗಿಳಿಸಿದ ಕೇಂದ್ರ ಸರಕಾರದ ಕ್ರಮ ವಿಪಕ್ಷಗಳ ತೀವ್ರ ವಾಗ್ದಾಳಿಗೆ ಗುರಿಯಾಗಿದ್ದು, ಸರಕಾರ ರಫೇಲ್ ಹಗರಣವನ್ನು ಈ ಮೂಲಕ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ. ಸಿಬಿಐ, ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಆಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ರಫೇಲ್ ಹಗರಣದಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸಲು ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್ ವರ್ಮಾ ಅವರು ತೋರಿಸಿದ್ದ ಆಸಕ್ತಿಗಾಗಿ ಅವರನ್ನು `ಉಚ್ಛಾಟಿಸಲಾಯಿತೇ' ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ದೇಶದ ಅತ್ಯುನ್ನತ ತನಿಖಾ ಏಜನ್ಸಿಯ ಸ್ವಾತಂತ್ರ್ಯಕ್ಕೆ ಸರಕಾರ ಕೊನೆಯ ಮೊಳೆ ಹೊಡೆದಿದೆ ಎಂದು ಅವರು ಆರೋಪಿಸಿದ್ದಾರೆ. “ಸಿಬಿಐಯ ವಿಶ್ವಾಸಾರ್ಹತೆ ಹಾಗೂ ಸಮಗ್ರತೆ ಸತ್ತು ಅದನ್ನು ಹೂಳಲಾಗಿದೆ” ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಅತ್ತ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, “ಸಿಬಿಐ ಬಿಬಿಐ ಆಗಿದೆ (ಬಿಜೆಪಿ ಬ್ಯರೋ ಆಫ್ ಇನ್ವೆಸ್ಟಿಗೇಶನ್), ದುರಾದೃಷ್ಟಕರ'' ಎಂದು ಟ್ವೀಟ್ ಮಾಡಿದ್ದಾರೆ. ಸರಕಾರ ತಾನೇ ಸ್ವತಃ ಆಯ್ಕೆ ಮಾಡಿ ನೇಮಿಸಿದ ಅಧಿಕಾರಿಯನ್ನು ರಕ್ಷಿಸುವ ಯತ್ನಗಳು ನಡೆಯುತ್ತಿವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಕ್ರಮದ ವಿರುದ್ಧ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಕಿಡಿಕಾರಿದ್ದಾರೆ.