ರಫೇಲ್ ಹಗರಣದ ದಾಖಲೆ ಸಂಗ್ರಹಿಸಿದ್ದಕ್ಕೆ ಅಲೋಕ್ ವರ್ಮರನ್ನು ಸಿಬಿಐನಿಂದ ಹೊರಗಟ್ಟಿದ ಮೋದಿ: ರಾಹುಲ್ ಆರೋಪ

Update: 2018-10-24 10:56 GMT

ಹೊಸದಿಲ್ಲಿ, ಅ.24: ಅಲೋಕ್ ವರ್ಮ ಅವರನ್ನು ಸಿಬಿಐ ಮುಖ್ಯಸ್ಥ ಸ್ಥಾನದಿಂದ ಕೇಂದ್ರ ಸರಕಾರ ಕೆಳಗಿಳಿಸಿದ ಕೆಲವೇ  ಗಂಟೆಗಳಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ರಫೇಲ್ ಹಗರಣವನ್ನು ಬಯಲಿಗೆಳೆಯುವ ಯಾರೇ ಆದರೂ ಅವರನ್ನು ಸರಕಾರ ಕಿತ್ತೆಸೆಯುವುದು'' ಎಂದಿದ್ದಾರೆ. ವರ್ಮ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳ ತನಿಖೆ ನಡೆಸಲು ಉದ್ದೇಶಿಸಿದ್ದರಿಂದಲೇ ಸರಕಾರ ಅವರನ್ನು ಪದಚ್ಯುತಗೊಳಿಸಿದೆ ಎಂದು ಹೇಳಿದರು.

ರಾಜಸ್ಥಾನದ ಹದೊತಿ ಎಂಬಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಚೌಕಿದಾರ್ (ಪ್ರಧಾನಿ) ತನ್ನ ಸ್ನೇಹಿತರನ್ನು ಬಚಾವ್ ಮಾಡಲು ವರ್ಮ ಆವರನ್ನು ಅವರ ಹುದ್ದೆಯಿಂದ ಕೆಳಗಿಳಿಸಿದ್ದಾರೆ” ಎಂದು ಆರೋಪಿಸಿದರು. “ಅಲೋಕ್ ವರ್ಮ ಅವರು ರಫೇಲ್ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದರು. ಅವರನ್ನು ಬಲವಂತವಾಗಿ  ರಜೆ ಮೇಲೆ ಕಳುಹಿಸಲಾಗಿದೆ. ರಫೇಲ್ ಒಪ್ಪಂದದ ವಾಸ್ತವವನ್ನು ಬಯಲಿಗೆಳೆಯಲು ಪ್ರಯತ್ನಿಸುವವರೆಲ್ಲರನ್ನೂ ಹೊರಗಟ್ಟಲಾಗುವುದು ಎಂಬ ಸ್ಪಷ್ಟ ಸಂದೇಶವಿದು. ದೇಶ ಮತ್ತು ಸಂವಿಧಾನ ಅಪಾಯದಲ್ಲಿದೆ''ಎಂದು ರಾಹುಲ್ ಹೇಳಿದರು.

``ಪ್ರಧಾನಿ ಜನರಿಂದ ಹಣ ಪಡೆದು ಅದನ್ನು ಅಂಬಾನಿ ಕಿಸೆಗೆ ತುಂಬಿಸುತ್ತಿದ್ದಾರೆ. ಅನಿಲ್ ಅಂಬಾನಿಯವರಿಗೆ ಅವರ ಸಾಲಗಳನ್ನು ತೀರಿಸಲು ಅನುವು ಮಾಡಲು ಎಚ್‍ಎಎಲ್‍ನಿಂದ ಈ ಒಪ್ಪಂದ ಸೆಳೆದು ಅನಿಲ್ ಕಂಪೆನಿಗೆ ಮೋದಿ ನೀಡಿದ್ದಾರೆ'' ಎಂದು ರಾಹುಲ್ ಪುನರುಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News