‘ಬೇಷರತ್ ಕ್ಷಮೆ’ ಯಾಚನೆಗೆ ಆಗ್ರಹಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗೆ ತರೂರ್ ಲೀಗಲ್ ನೋಟಿಸ್

Update: 2018-11-01 09:22 GMT

ಹೊಸದಿಲ್ಲಿ, ನ.1: ತನ್ನನ್ನು ‘ಕೊಲೆ ಆರೋಪಿ’ ಎಂದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೋಟಿಸ್ ಜಾರಿಗೊಳಿಸಿ ಅವರು ‘ಬೇಷರತ್ ಕ್ಷಮೆ’ ಯಾಚಿಸಬೇಕೆಂದು ಒತ್ತಾಯಿಸದ್ದಾರೆ. ಸಚಿವರ ಹೇಳಿಕೆ ‘ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನಹಾನಿಕರ’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

‘‘ತನ್ನ ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ತರೂರ್ ಅವರನ್ನು ಆರೋಪಿಯೆಂದು ಪ್ರಾಸಿಕ್ಯೂಶನ್ ಗುರುತಿಸಿಲ್ಲ, ವಿಚಾರಣಾ ನ್ಯಾಯಾಲಯದಲ್ಲಿ ಅವರ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ. ದೋಷಾರೋಪ ಪಟ್ಟಿಯಲ್ಲಿ ಕೂಡ ಕೊಲೆ ಆರೋಪದ ಉಲ್ಲೇಖವಿಲ್ಲ’’ ಎಂದು ನೋಟಿಸ್ ಹೇಳಿದೆಯಲ್ಲದೆ, ಸಚಿವರು ಕೊಲೆ ಆರೋಪಿ ಎಂದು ಹೇಳಿರುವುದು ದುರುದ್ದೇಶದಿಂದ ಎಂಬುದನ್ನು ಸೂಚಿಸುತ್ತದೆ ಎಂದಿದೆ.

ಸಚಿವರು ತಮ್ಮ ವಿರುದ್ಧ ಆರೋಪ ಹೊರಿಸುತ್ತಿರುವ ವೀಡಿಯೋಗಳನ್ನೂ ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಹಾಗೂ 48 ಗಂಟೆಗಳೊಳಗಾಗಿ ಲಿಖಿತ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ನೋಟಿಸ್ ತಿಳಿಸಿದೆ. ಇಲ್ಲದೇ ಹೋದಲ್ಲಿ ಪ್ರಕರಣ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದೆ.

ಜನವರಿ 17, 2014ರಂದು ದಿಲ್ಲಿಯ ವಿಲಾಸಿ ಹೋಟೆಲ್ ಒಂದರಲ್ಲಿ ಸುನಂದಾ ಪುಷ್ಕರ್ ಮೃತದೇಹ ಪತ್ತೆಯಾಗಿತ್ತು. ಈ ಕುರಿತಂತೆ ತರೂರ್ ವಿರುದ್ಧ ಸೆಕ್ಷನ್ 498ಎ (ಹಿಂಸೆ) ಹಾಗೂ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರಣೆ) ಅನ್ವಯ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News