ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕನ ಹಿಂದಿದೆ 70 ಕೋಟಿ ರೂ. ಜಮೀನು ಕಥೆ!

Update: 2018-11-01 09:55 GMT

ಮುಂಬೈ, ನ.1: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸಕರಿಬ್ಬರ ಪೈಕಿ ಮಾಜಿ ಗೋವಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಸುಭಾಶ್ ಶಿರೋಡ್ಕರ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಅವರ ಒಡೆತನದ ಜಮೀನನ್ನು ರೂ. 70.44 ಕೋಟಿ ಮೊತ್ತಕ್ಕೆ ಕೈಗಾರಿಕಾ ಎಸ್ಟೇಟ್ ಸ್ಥಾಪನೆಗಾಗಿ ಖರೀದಿಸಲು ಸರಕಾರ ಫೆಬ್ರವರಿಯಲ್ಲಿ ಅನುಮತಿ ನೀಡಿದ ಕೆಲವೇ ತಿಂಗಳುಗಳಲ್ಲಿ ಅವರು ಬಿಜೆಪಿ ಸೇರಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಉತ್ತರ ಗೋವಾ ಜಿಲ್ಲೆಯ ಪೊಂಡಾ ತಾಲೂಕಿನ ಶಿರೋಡ ಕ್ಷೇತ್ರದ ಶಾಸಕರಾಗಿರುವ ಸುಭಾಷ್ ಅವರ ಒಡೆತನದ ಭೂ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತ ಈಗಾಗಲೇ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದ್ದು, ಭೂಸ್ವಾಧೀನ ಕುರಿತಂತೆ ಎಲ್ಲಾ ದಾಖಲೆಗಳನ್ನೂ ಒದಗಿಸುವಂತೆ ಸರಕಾರಕ್ಕೆ ಸೂಚನೆ ನೀಡಿದೆ. ಗೋವಾ ಮೂಲದ ವಕೀಲ ಏರಿಸ್ ರಾಡ್ರಿಗಸ್ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಸುಭಾಷ್, ಸಿಎಂ ಮನೋಹರ್ ಪಾರಿಕ್ಕರ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಅದರಲ್ಲಿ ಹೆಸರಿಸಿದ್ದರು.

ಸುಭಾಷ್ ಅವರಿಗೆ ಸೇರಿದ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು 2013ರಲ್ಲಿಯೇ ಆರಂಭಿಸಲಾಗಿತ್ತಾದರೂ ಅದು ಈ ವರ್ಷದ ಫೆಬ್ರವರಿಯಲ್ಲಿ ಕೊನೆಗೂ ಅನುಮೋದನೆಗೊಂಡಿತ್ತು. ಸುಭಾಷ್ ಅವರಿಗೆ ಸೇರಿದ ಭೂಮಿ 1,87,825 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಅದನ್ನು ಶಿರೋಡ ಕೈಗಾರಿಕಾ ಎಸ್ಟೇಟ್ ಇದರ ಎರಡನೇ ಹಂತಕ್ಕಾಗಿ ಸ್ವಾಧೀನ ಪಡಿಸಲಾಗಿದೆ.

ಈ ಜಮೀನು ಇರುವ ಜಾಗಕ್ಕೆ ಆರು ಸರ್ವೇ ಸಂಖ್ಯೆಗಳಿದ್ದು, ಅವುಗಳಲ್ಲಿ ನಾಲ್ಕು ವೇದಾಂತ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಸ್ಥೆಗೆ ಸೇರಿದೆ. ಶಿರೋಡ್ಕರ್ ಹಾಗೂ ಅವರ ಮೂವರು ಸಂಬಂಧಿಕರಾದ ಅಮಿತ್ ಶಿರೋಡ್ಕರ್, ಉಮೇಶ್ ಶಿರೋಡ್ಕರ್ ಹಾಗೂ ಸತ್ತೇಶ್ ಶಿರೋಡ್ಕರ್ ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ಈ ಸಂಸ್ಥೆಯಲ್ಲಿ ಸುಭಾಷ್ ಅವರಿಗೆ ಶೇ.40ರಷ್ಟು ಪಾಲು ಇದೆ. ಸರಕಾರ ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಳಿಸಿದ್ದರೂ ಭೂಸ್ವಾಧೀನ ನಡೆಸದೇ ಇರುವ ಬಗ್ಗೆ ಹಾಗೂ ಮಾಲಕರಿಗೆ ಪರಿಹಾರ ನೀಡದೇ ಇರುವ ವಿಚಾರದಲ್ಲಿ ಸುಭಾಷ್ 2016ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು ಹಾಗೂ ತೀರ್ಪು ಅವರ ಪರವಾಗಿ ಬಂದಿತ್ತೆಂದು ಸುಭಾಷ್ ಸ್ವತಃ ಹೇಳಿದರೂ ದಾಖಲೆಗಳು ತಿಳಿಸುವಂತೆ ಸರಕಾರ ಈ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿತ್ತೆಂದು ಕೋರ್ಟಿಗೆ ತಿಳಿಸಲಾಗಿತ್ತು ಹಾಗೂ ಈ  ಪ್ರಕರಣ ನವೆಂಬರ್ 2016ರಲ್ಲಿ ವಿಲೇವಾರಿಗೊಂಡಿತ್ತು.

ಜುಲೈ 2017ರಲ್ಲಿ ಮುಖ್ಯಮಂತ್ರಿ ಪಾರಿಕ್ಕರ್ ನೇತೃತ್ವದ ಸಚಿವ ಸಂಪುಟ ಈ ಭೂಮಿಯನ್ನು ಡಿನೋಟಿಫೈಗೊಳಿಸುವ ಬಗ್ಗೆ ಯೋಚಿಸಿತ್ತಾದರೂ ಅಂತಿಮವಾಗಿ ಫೆಬ್ರವರಿ 2018ರಲ್ಲಿ  ಈ ಜಮೀನನ್ನು ರೂ 70.44 ಕೋಟಿಗೆ ಸ್ವಾಧೀನ ಪಡಿಸಲು ನಿರ್ಧರಿಸಿತ್ತು.

ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡುಲ್ಕರ್ ಈ ಸ್ವಾಧೀನ ಪ್ರಕ್ರಿಯೆಯನ್ನು ಸಮರ್ಥಿಸಿದ್ದು ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಸುಭಾಶ್ ಅವರು 2007  ಹಾಗೂ 2012ರ ಚುನಾವಣೆಯಲ್ಲಿ ಸ್ಪರ್ಧಿಸಿದ ಸಮಯ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ವೇದಾಂತ ರಿಯಲ್ ಎಸ್ಟೇಟ್  ಮಾಲಕ ತಾನೆಂದು ಹೇಳಿಕೊಂಡಿದ್ದರೆ, ತಮ್ಮ 2012 ಅಫಿಡವಿಟ್ ನಲ್ಲಿ ಅವರು ಈ ಜಮೀನನನ್ನು ಜಂಟಿ ಪಾಲುದಾರಿಕೆಯಲ್ಲಿ ಅಕ್ಟೋಬರ್ 31, 2006ರಲ್ಲಿ ರೂ 1.08 ಕೋಟಿಗೆ ಖರೀದಿಸಿದ್ದರೆಂದು  ಹಾಗೂ ಅದರ ಈಗಿನ ಮಾರುಕಟ್ಟೆ ಮೌಲ್ಯ ರೂ 3.72 ಕೋಟಿ ಎಂದೂ ವಿವರಿಸಿದ್ದರು.

ಆದರೆ ರಿಜಿಸ್ಟ್ರಾರ್ ಆಫ್ ಕಂಪೆನೀಸ್ ದಾಖಲೆಗಳಲ್ಲಿ ವೇದಾಂತ ರಿಯಲ್ ಎಸ್ಟೇಟ್ ಉಲ್ಲೇಖವೇ ಇಲ್ಲ. ಕೇವಲ ಜಮೀನು ಖರೀದಿಗಾಗಿ ಈ ಸಂಸ್ಥೆಯನ್ನು ರಚಿಸಲಾಗಿತ್ತೆಂದು ಮಾಜಿ ಸಚಿವರೊಬ್ಬರು ಆರೋಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News