ಹೊಣೆಗಾರಿಕೆ ಮರೆತ ಮಾಧ್ಯಮಗಳು

Update: 2018-11-01 18:18 GMT

ಮಾನ್ಯರೇ,

ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳನ್ನು ಹೇಗೆ ನಿರ್ವಹಿಸುತ್ತಿವೆ ಎನ್ನುವುದು ಅವುಗಳು ಎಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಮತ್ತು ಪ್ರಾಶಸ್ತ್ಯ ಕೊಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಯಾರೋ ಒಬ್ಬ ನಟ ಗಡ್ಡ ಬೋಳಿಸಿದ್ದನ್ನು, ಇನ್ನೊಬ್ಬ ನಟನ ನಿಶ್ಚಿತಾರ್ಥ ಮುರಿದು ಬಿದ್ದಿದ್ದನ್ನು ತಮ್ಮ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುವ, ತಮ್ಮ ಚಾನಲ್‌ಗಳಲ್ಲಿ ಗಂಟೆ ಗಟ್ಟಲೆ ಕೊರೆಯುವ ಮನಃಸ್ಥಿತಿಯುಳ್ಳ ಮಾಧ್ಯಮಗಳಿಂದಾಗಿ, ಅವುಗಳಿಗೆ ತಮ್ಮ ಹೊಣೆಗಾರಿಕೆಯ, ಮಹತ್ತರ ಜವಾಬ್ದಾರಿಗಳ ಕಿಂಚಿತ್ತೂ ಅರಿವಿಲ್ಲ ಎಂಬುದನ್ನು ಅವುಗಳು ಖುದ್ದಾಗಿ ಜಗಜ್ಜಾಹೀರುಗೊಳಿಸುತ್ತಿವೆ ಎಂದು ಭಾವಿಸಬೇಕಷ್ಟೇ!..

ಒಂದೆಡೆ ಕೋಟಿಗಟ್ಟಲೆ ಹಣ ಲೂಟಿ ಮಾಡಿ, ಹಗರಣಗಳಲ್ಲಿ ಪಾಲ್ಗೊಂಡು, ದೇಶದ ಖಜಾನೆಯನ್ನೇ ಬರಿದಾಗಿಸುತ್ತಿರುವವರನ್ನೇ ಹಾಡಿಹೊಗಳಿ ಬರೆಯುತ್ತಿರುವ ಇವುಗಳು, ಇನ್ನೊಂದೆಡೆ ದೇಶದ ಬೆನ್ನೆಲುಬು ಎಂದು ಗುರುತಿಸಿಕೊಂಡ ಬಡರೈತನ ಆತ್ಮಹತ್ಯೆಯನ್ನು ಅದೆಲ್ಲೋ ಒಳಪುಟಗಳ ಸಂದಿಯಲ್ಲಿ ಪ್ರಕಟಿಸಿ ಕೃತಾರ್ಥವೆನಿಸಿಕೊಳ್ಳುತ್ತಿವೆ.

ಮಾಧ್ಯಮಗಳ ಈ ದಾಸ್ಯ ಹೀಗೆ ಮುಂದುವರಿದದ್ದೇ ಆದರೆ ಸ್ವಾತಂತ್ರ ಪೂರ್ವಕ್ಕಿಂತ ಹೀನಾಯ ಸ್ಥಿತಿಗೆ ದೇಶ ತಲುಪಲೂ ಬಹುದು. ಮೊದಲು ಬ್ರಿಟಿಷರು ದೇಶವನ್ನು ಕೊಳ್ಳೆ ಹೊಡೆದರು. ಈಗ ನಮ್ಮ ಹೆಬ್ಬೆಟ್ಟು ರಾಜಕಾರಣಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ; ಇವೆಲ್ಲವನ್ನೂ ತಿಳಿದ ಮಾಧ್ಯಮದ ಮಂದಿಗಳನೇಕರು ತಮ್ಮ ಸ್ವಾರ್ಥಕ್ಕಾಗಿ ಆ ರಾಜಕಾರಣಿಗಳನ್ನು ಸಮರ್ಥಿಸುವುದು ಸುಳ್ಳಲ್ಲ.

ಮಾಧ್ಯಮಗಳು ತಮ್ಮ ಜವಾಬ್ದಾರಿಗಳನ್ನು ನಿಜವಾದ ಅರ್ಥದಲ್ಲಿ ಅರಿತುಕೊಂಡು; ಜನರಲ್ಲಿ ಜಾಗೃತಿ ಮೂಡಿಸಿ, ದೇಶಾದ್ಯಂತ ನಿಷ್ಠಾವಂತ ಪ್ರತಿನಿಧಿಗಳನ್ನು ಆರಿಸಲು ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುವಂತಾಗಬಹುದು.

Writer - -ಮನ್ಸೂರ್ ಅಹ್ಮದ್, ಮಂಗಳೂರು

contributor

Editor - -ಮನ್ಸೂರ್ ಅಹ್ಮದ್, ಮಂಗಳೂರು

contributor

Similar News