ದೇಶವಿರೋಧಿ ಎಂದ ಎಬಿವಿಪಿ: ಗುಜರಾತ್ ವಿವಿಗೆ ಸೇರುವುದಿಲ್ಲ ಎಂದ ರಾಮಚಂದ್ರ ಗುಹಾ

Update: 2018-11-02 10:16 GMT

ಹೊಸದಿಲ್ಲಿ, ನ.2: ತನ್ನ ನಿಯಂತ್ರಣಕ್ಕೆ ಮೀರಿದ ಸನ್ನಿವೇಶಗಳಿಂದಾಗಿ' ಅಹ್ಮದಾಬಾದ್ ವಿಶ್ವವಿದ್ಯಾಲಯದ ಸೇವೆಗೆ ತಾನು ಸೇರುವುದಿಲ್ಲ ಎಂದು ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಟ್ವೀಟ್ ಮಾಡಿದ್ದಾರೆ.

ಗುಹಾ ಅವರನ್ನು ಶ್ರೇಣಿಕ್ ಲಾಲ್‍ ಭಾಯಿ ಪೀಠದ ಪ್ರೊಫೆಸರ್ ಆಫ್ ಹ್ಯುಮಾನಿಟೀಸ್ ಹಾಗೂ ಗಾಂಧಿ ವಿಂಟರ್ ಸ್ಕೂಲ್ ನ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಅಕ್ಟೋಬರ್ 16ರಂದು ವಿಶ್ವವಿದ್ಯಾಲಯ ಘೋಷಿಸಿತ್ತು. ಅವರು ಫೆಬ್ರವರಿ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಇತ್ತೀಚೆಗೆ ಎಬಿವಿಪಿ ಅವರ ನೇಮಕಾತಿಗೆ ತೀವ್ರ ಆಕ್ಷೇಪ ಸೂಚಿಸಿ ವಿವಿ ತನ್ನ ಆದೇಶ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ ಬೆನ್ನಲ್ಲೇ ಗುಹಾ ಅವರ ಈ ನಿರ್ಧಾರ ಬಂದಿದೆ.

``ನನ್ನ ನಿಯಂತ್ರಣಕ್ಕೆ ಮೀರಿದ ಸನ್ನಿವೇಶಗಳಿಂದಾಗಿ ನಾನು ಅಹ್ಮದಾಬಾದ್ ವಿವಿ ಸೇರುವುದಿಲ್ಲ. ವಿವಿಗೆ ನನ್ನ ಶುಭ ಹಾರೈಕೆಗಳು, ಸಂಸ್ಥೆಯ ಬಳಿ ಉತ್ತಮ ಶಿಕ್ಷಕರಿದ್ದಾರೆ ಹಾಗೂ ಅಪ್ರತಿಮ ಉಪಕುಲಪತಿಗಳಿದ್ದಾರೆ. ಗಾಂಧೀಜಿಯ ತವರು ರಾಜ್ಯವಾದ ಗುಜರಾತ್‍ನಲ್ಲಿ ಗಾಂಧಿ ಅವರ ಆದರ್ಶಗಳು ಮತ್ತೊಮ್ಮೆ ಜೀವಂತವಾಗುವ ದಿನ ಬರಲಿ,'' ಎಂದು ಗುಹಾ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಗುಹಾ ನೀಡದೇ ಇದ್ದರೂ “ಗಾಂಧಿಯ ಜೀವನ ವೃತ್ತಾಂತ ಬರೆದವರಿಗೆ ಗಾಂಧಿಯ ಬಗ್ಗೆ ಗಾಂಧಿಯ ಸ್ವಂತ ಊರಿನಲ್ಲಿ ಕಲಿಸಲು ಸಾಧ್ಯವಾಗುತ್ತಿಲ್ಲ'' ಎಂದು ಬರೆದಿದ್ದಾರೆ. ಗುಹಾ `ರಾಷ್ಟ್ರ ವಿರೋಧಿ' ಬರಹಗಳನ್ನು ಬರೆದಿದ್ದಾರೆ ಎಂದು ಎಬಿವಿಪಿ ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News