×
Ad

ಮನೀಶ್ ಕೌಶಿಕ್‌ಗೆ ಸತತ ಸ್ವರ್ಣ, ಗೌರವ್‌ಗೆ ಬೆಳ್ಳಿ

Update: 2018-11-02 23:48 IST

ಪುಣೆ, ನ.2: ಹಿರಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಮನೀಶ್ ಕೌಶಿಕ್(60ಕೆಜಿ)ಸತತ ಎರಡನೇ ಸ್ವರ್ಣ ಪದಕ ಜಯಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತ ಗೌರವ್ ಬಿಧುರಿ(56ಕೆಜಿ)ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಶುಕ್ರವಾರ ಕೊನೆಗೊಂಡ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್‌ಎಸ್‌ಸಿಬಿ) ಬಾಕ್ಸರ್‌ಗಳು ಫೈನಲ್ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಒಟ್ಟು 8 ಚಿನ್ನ ಜಯಿಸಿದ್ದಾರೆ.

ಹಾಲಿ ಚಾಂಪಿಯನ್ ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್(ಪಿಎಸ್‌ಪಿಬಿ)ಉಳಿದೆರಡು ಚಿನ್ನ ಜಯಿಸಿ 2ನೇ ಸ್ಥಾನ ಪಡೆದಿದೆ.

ಸ್ವದೇಶದಲ್ಲಿ ಸಾಮಾನ್ಯವಾಗಿ ಉತ್ತಮ ಪ್ರದರ್ಶನ ನೀಡುವ ಹರ್ಯಾಣದ ಬಾಕ್ಸರ್‌ಗಳು ಈ ಬಾರಿ ಒಂದೂ ಚಿನ್ನ ಜಯಿಸಿಲ್ಲ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಿಧುರಿ ಬಾಟಮ್‌ವೇಟ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಮದನ್ ಲಾಲ್‌ಗೆ ಸೋಲುವ ಮೂಲಕ ಬೆಳ್ಳಿ ಜಯಿಸಿದರು.

 ಕಿಂಗ್ಸ್ ಕಪ್‌ನಲ್ಲಿ ಕಂಚು ವಿಜೇತ ರೋಹಿತ್ ಟೊಕಾಸ್ 64 ಕೆಜಿ ವಿಭಾಗದಲ್ಲಿ ರೈಲ್ವೇಸ್‌ಗೆ ಚಿನ್ನ ಗೆದ್ದುಕೊಟ್ಟರು. ರೋಹಿತ್ ಫೈನಲ್‌ನಲ್ಲಿ ಉತ್ತರಪ್ರದೇಶದ ಅಭಿಷೇಕ್ ಯಾದವ್‌ಗೆ ಸೋತಿದ್ದಾರೆ.

ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ 91 ಕೆಜಿ ತೂಕ ವಿಭಾಗದಲ್ಲಿ ಪ್ರಾಬಲ್ಯ ಮುಂದುವರಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚೊಚ್ಚಲ ಚಿನ್ನ ಜಯಿಸಿದರು. ಸಂಜೀತ್ ಫೈನಲ್‌ನಲ್ಲಿ ಹರ್ಯಾಣದ ಪ್ರವೀಣ್ ಕುಮಾರ್‌ರನ್ನು ಸೋಲಿಸಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಹಾಗೂ ಈ ವರ್ಷ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಸತೀಶ್ ಕುಮಾರ್(+91ಕೆಜಿ)ಫೈನಲ್‌ನಲ್ಲಿ ಜಸ್ವೀರ್ ಸಿಂಗ್‌ರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ.

81 ಕೆಜಿ ವಿಭಾಗದಲ್ಲಿ ಮನೀಶ್ ಪನ್ವಾರ್ ರಾಜಸ್ಥಾನದ ಬ್ರಿಜೇಶ್ ಯಾದವ್‌ರನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

ಸರ್ವಿಸಸ್‌ನ ಇತರ ಬಾಕ್ಸರ್‌ಗಳಾದ ದೀಪಕ್(49 ಕೆಜಿ), ಪಿಎಲ್ ಪ್ರಸಾದ್(52 ಕೆಜಿ), ದುರ್ಯೋಧನ್ ಸಿಂಗ್ ನೇಗಿ(69ಕೆಜಿ) ಹಾಗೂ ಮಂಜೀತ್ ಸಿಂಗ್(75ಕೆಜಿ)ಚಿನ್ನ ಜಯಿಸಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News