ಆರು ಕಾಲ್ಬೆರಳ ಅಥ್ಲೀಟ್ ಸ್ವಪ್ನಾಗೆ ಕೊನೆಗೂ ಲಭಿಸಿತು ಶೂ
ಹೊಸದಿಲ್ಲಿ, ನ.5: ಏಶ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ವಿಜೇತ ಸ್ವಪ್ನಾ ಬರ್ಮನ್ ಹೆಪ್ಟಾಥ್ಲಾನ್ ವಿಭಾಗದ ವಿವಿಧ ಸ್ಪರ್ಧೆಗಳಿಗೆ ಸೂಕ್ತವಾಗುವ ಏಳು ಜೊತೆ ಶೂಗಳನ್ನು ಸ್ವೀಕರಿಸಿದ್ದಾರೆ ಎಂದು ಕ್ರೀಡಾಸಾಧನಗಳನ್ನು ಉತ್ಪಾದಿಸುವ ಕಂಪೆನಿ ಅಡಿಡಾಸ್ ತಿಳಿಸಿದೆ.
ಈ ವರ್ಷಾರಂಭದಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಹೆಪ್ಟಾಥ್ಲಾನ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ವಪ್ನಾ ಬರ್ಮನ್‌ಗೆ ಹುಟ್ಟುವಾಗಲೇ ಎರಡೂ ಪಾದದಲ್ಲಿ ಆರು ಬೆರಳುಗಳಿದ್ದವು. ಏಶ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಬಳಿಕ ಸ್ವಪ್ನಾರ ಪರಿಸ್ಥಿತಿ ಎಲ್ಲರ ಗಮನ ಸೆಳೆದಿತ್ತು.
ಅಡಿಡಾಸ್ ಕಳೆದ ಎರಡು ತಿಂಗಳುಗಳಿಂದ ಭಾರತದ ಪ್ರಾಧಿಕಾರ ಹಾಗೂ ಜರ್ಮನಿಯಲ್ಲಿರುವ ತನ್ನದೇ ಅಥ್ಲೆಟಿಕ್ಸ್ ಸರ್ವಿಸ್ ಲ್ಯಾಬ್‌ನಲ್ಲಿ ಸ್ವಪ್ನಾರ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಕಾಳಜಿ ವಹಿಸಿ ಕಾರ್ಯೋನ್ಮುಖವಾಗಿತ್ತು.
‘‘ಅಡಿಡಾಸ್ ಕುಟುಂಬಕ್ಕೆ ಸೇರುವುದು ಎಲ್ಲ ಕ್ರೀಡಾಪಟುಗಳಿಗೆ ಒಂದು ಗೌರವ. ಭಾರತಕ್ಕೆ ಚಿನ್ನ ಗೆದ್ದುಕೊಡಬೇಕೆಂಬ ನನ್ನ ಕನಸು ಈಡೇರಿದೆ. ಇದೀಗ ನಾನು ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ತಯಾರಿ ನಡೆಸುವೆ. ನನ್ನ ಹೊಸ ಪಾದರಕ್ಷೆಯನ್ನು ಧರಿಸಿ ತರಬೇತಿ ನಡೆಸಲು, ಸ್ಪರ್ಧಿಸಲು ಎದುರು ನೋಡುತ್ತಿರುವೆ. ಅಡಿಡಾಸ್‌ನ ನಿರಂತರ ಬೆಂಬಲದಿಂದ ಅಥ್ಲೀಟ್ ಆಗಿ ಮತ್ತಷ್ಟು ಬೆಳೆಯಲು ಇಷ್ಟಪಡುವೆ’’ ಎಂದು ತನ್ನ ಕಾಲಿಗೆ ಒಪ್ಪುವ ಶೂ ಪಡೆಯಲು ಜರ್ಮನಿಗೆ ತೆರಳಿದ್ದ ಸ್ವಪ್ನಾ ಪ್ರತಿಕ್ರಿಯೆ ನೀಡಿದರು.
ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಬಳಿಕ ತನ್ನ ಕಾಲಿಗೆ ಒಪ್ಪುವಂತಹ ಶೂಗಳನ್ನು ಒದಗಿಸಿ ಎಂದು ಸ್ವಪ್ನಾ ವಿನಂತಿಸಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತುರ್ತಾಗಿ ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದರು.