ಜಯಲಲಿತಾ ಅವರ ಹೊಸ ಪ್ರತಿಮೆ ಸ್ಥಾಪನೆ

Update: 2018-11-14 18:08 GMT

ಚೆನ್ನೈ, ನ. 14: ಆಡಳಿತಾರೂಢ ಎಐಡಿಎಂಕೆ ಚೆನ್ನೈಯಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿದೆ. ರಾಜ್ಯ ಸಚಿವರು, ಸಂಸದರು ಹಾಗೂ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಎಐಎಡಿಎಂಕೆಯ ಸಂಯೋಜಕ ಒ. ಪನ್ನೀರ್‌ಸೆಲ್ವಂ ಹಾಗೂ ಜಂಟಿ ಸಂಯೋಜಕ ಕೆ. ಪಳನಿಸ್ವಾಮಿ ಜಯಲಲಿತಾ ಅವರ ನವೀಕೃತ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು ಎಂದು ಪಕ್ಷದ ಪತ್ರಿಕಾ ಹೇಳಿಕೆ ತಿಳಿಸಿದೆ.

ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಪನ್ನೀರ್ ಸೆಲ್ವಂ ಉಪ ಮುಖ್ಯಮಂತ್ರಿ. ಮೂರ್ತಿ ರೂಪಿಸಿದ ವಾಸ್ತುಶಿಲ್ಪಿ ರಾಜ್‌ಕುಮಾರ್ ಉದಯಾರ್ ಅವರಿಗೆ ಇಬ್ಬರು ನಾಯಕರು ಗೌರವಿಸಿದರು. ಜಯಲಲಿತಾ ಅವರ 70ನೇ ಜನ್ಮ ದಿನಾಚರಣೆಯ ಸಂದರ್ಭ ಫೆಬ್ರವರಿ 24ರಂದು ಇಬ್ಬರು ನಾಯಕರು ಜಯಲಲಿತಾ ಅವರ ಆಳೆತ್ತರದ ಮೂರ್ತಿ ಅನಾವರಣಗೊಳಿಸಿದ್ದರು.

ಆದರೆ, ಈ ಪ್ರತಿಮೆ ಜಯಲಲಿತಾ ಅವರನ್ನು ಪೂರ್ಣಪ್ರಮಾಣದಲ್ಲಿ ಹೋಲತ್ತಿರಲಿಲ್ಲವಾದುದರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಪ್ರತಿಮೆ ಸ್ಥಾಪಿಸಲು ಪಕ್ಷ ನಿರ್ಧರಿಸಿತ್ತು ಎಂದು ಹೇಳಿಕೆ ತಿಳಿಸಿದೆ. ಎಐಎಡಿಎಂಕೆಯ ಕೇಂದ್ರ ಕಚೇರಿಯ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾಗಿರುವ ಪಕ್ಷದ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಯ ಸಮೀಪ ಜಯಲಲಿತಾ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಜಯಲಲಿತಾ ಅವರ ಆಳೆತ್ತರದ ಪ್ರತಿಮೆಯನ್ನು ಕಂಚಿನಿಂದ ಮಾಡಲಾಗಿದೆ. ಇದು ಈ ಹಿಂದಿನ ಪ್ರತಿಮೆಗಿಂತ ಸ್ಪಲ್ಪ ಹೆಚ್ಚು ತೂಕವಿದ್ದು, 800 ಕಿ.ಗ್ರಾಂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News