ರಣಜಿ: ಕರ್ನಾಟಕಕ್ಕೆ ಮುನ್ನಡೆ

Update: 2018-11-14 18:10 GMT

ನಾಗ್ಪುರ, ನ.14: ಆರಂಭಿಕ ಆಟಗಾರ ನಿಶ್ಚಲ್ ಹಾಗೂ ಬಿಆರ್ ಶರತ್(103, 161 ಎಸೆತ)ಶತಕದ ಕೊಡುಗೆ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ಮುನ್ನಡೆ ಸಾಧಿಸಿದೆ.

ನಿಶ್ಚಲ್ ಎರಡನೇ ಶತಕ(113, 338 ಎಸೆತ, 10 ಬೌಂಡರಿ) ಹಾಗೂ ಶರತ್(103, 161 ಎಸೆತ, 20 ಬೌಂಡರಿ)ಚೊಚ್ಚಲ ಶತಕದ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 378 ರನ್ ಗಳಿಸಿ ಆಲೌಟಾದ ಕರ್ನಾಟಕ 71 ರನ್ ಮುನ್ನಡೆ ಸಾಧಿಸಿತು. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 307 ರನ್ ಗಳಿಸಿ ಆಲೌಟಾಗಿದೆ.

71 ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ವಿದರ್ಭ 2 ವಿಕೆಟ್‌ಗಳ ನಷ್ಟಕ್ಕೆ 72 ರನ್ ಗಳಿಸಿದೆ. ನಾಯಕ ಫೈಝ್ ಫಝಲ್(14)ರನೌಟಾಗಿದ್ದರೆ, ಸಂಜಯ್(13) ಸ್ಪಿನ್ನರ್ ಸುಚಿತ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ವಸೀಂ ಜಾಫರ್(21) ಹಾಗೂ ಗಣೇಶ್ ಸತೀಶ್(24)ಕ್ರೀಸ್ ಕಾಯ್ದುಕೊಂಡಿದ್ದು, 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 40 ರನ್ ಸೇರಿಸಿದ್ದಾರೆ.

ಇದಕ್ಕೂ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 208 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕದ ಪರ ನಿಶ್ಚಲ್ ಹಾಗೂ ಶರತ್ 6ನೇ ವಿಕೆಟ್‌ಗೆ 160 ರನ್ ಜೊತೆಯಾಟ ನಡೆಸಿದರು.

ಕರ್ನಾಟಕ 149 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಆಗ ತಂಡಕ್ಕೆ ಆಸರೆಯಾಗಿ ನಿಂತ ನಿಶ್ಚಲ್ ಹಾಗೂ ಶರತ್ ಮೊದಲ ಇನಿಂಗ್ಸ್ ಮುನ್ನಡೆಗೆ ನೆರವಾದರು. ಶರತ್ ತನ್ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದರು.

ನಾಯಕ ವಿನಯಕುಮಾರ್(ಔಟಾಗದೆ 39,98 ಎಸೆತ, 6 ಬೌಂಡರಿ) ಹಾಗೂ ಜಗದೀಶ್ ಸುಚಿತ್(20,49 ಎಸೆತ)ಕೆಳ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಿ ಕರ್ನಾಟಕದ ಸ್ಕೋರನ್ನು 378ಕ್ಕೆ ತಲುಪಿಸಿದರು.

ವಿದರ್ಭದ ಪರ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ ಐದು ವಿಕೆಟ್ ಗೊಂಚಲು(91ಕ್ಕೆ5) ಪಡೆದರು. ಅಕ್ಷಯ್ ವಖಾರೆ(2-93) ಹಾಗೂ ಸಂಜಯ್(2-23)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

►ವಿದರ್ಭ ಮೊದಲ ಇನಿಂಗ್ಸ್: 307/10

►ಕರ್ನಾಟಕ ಮೊದಲ ಇನಿಂಗ್ಸ್: 134 ಓವರ್‌ಗಳಲ್ಲಿ 378/10

(ನಿಶ್ಚಲ್ 113, ಶರತ್ 103, ವಿನಯಕುಮಾರ್ ಔಟಾಗದೆ 39, ಎಸ್,ಗೋಪಾಲ್ 30, ಆದಿತ್ಯ ಸರ್ವಾಟೆ 5-91,ಅಕ್ಷಯ್ ವಖಾರೆ 2-93, ಸಂಜಯ್ 2-23)

►ವಿದರ್ಭ 2ನೇ ಇನಿಂಗ್ಸ್: 28 ಓವರ್‌ಗಳಲ್ಲಿ 72/2

(ಗಣೇಶ್ ಸತೀಶ್ ಔಟಾಗದೆ 24, ಜಾಫರ್ 21, ಸುಚಿತ್ 1-18)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News