ಶ್ರೀಕಾಂತ್, ಸಮೀರ್ ವರ್ಮಾ ಕ್ವಾರ್ಟರ್ ಫೆನಲ್‌ಗೆ

Update: 2018-11-15 18:22 GMT

ಸಕಾವ್ಲಾನ್, ನ.15: ಹಾಂಕಾಂಗ್ ಓಪನ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕೆ.ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಗುರುವಾರ ಕ್ವಾರ್ಟರ್ ಫೈನಲ್ ತಲುಪಿದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ನಾಲ್ಕನೇ ಶ್ರೇಯಾಂಕದ ಶ್ರೀಕಾಂತ್ ಅವರು ಭಾರತದ ಎಚ್.ಎಸ್. ಪ್ರಣಯ್ ವಿರುದ್ಧ 18-21, 30-29, 21-18 ಅಂತರದಲ್ಲಿ ಜಯ ಗಳಿಸಿದರು. ಭಾರತದ ಇಬ್ಬರು ಆಟಗಾರರ ನಡುವೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ಒಂದು ಗಂಟೆ ಮತ್ತು 7 ನಿಮಿಷಗಳ ಕಾಲ ನಡೆಯಿತು. ಇದೇ ವೇಳೆ ಎದುರಾಳಿ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ಗೆ ಸುಲಭವಾಗಿ ಲಗ್ಗೆ ಇಟ್ಟರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅವರು ವರ್ಲ್ಡ್ ನಂ.2 ಕೊರಿಯಾದ ಜಿ ಹ್ಯೂನ್ ಸಂಗ್ ವಿರುದ್ಧ 24-26, 20-22 ಅಂತರದಲ್ಲಿ ಸೋಲು ಅನುಭವಿಸಿದರು. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಅವರು ಚೈನಾ ತೈಪೆಯ ಲೀ ಜೀ ಹ್ಯೂಯ್ ಮತ್ತು ಲೀ ಯಾಂಗ್ ವಿರುದ್ಧ 16-21, 15-21 ಅಂತರದಲ್ಲಿ ಸೋಲನುಭವಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಚೈನಾ ತೈಪೆಯ ಲೀ ಯಾಂಗ್ ಮತ್ತು ಸು ಯಾ ಚಿಂಗ್ ವಿರುದ್ಧ 17-21, 11-21 ಅಂತರದಲ್ಲಿ ಸೋಲು ಅನುಭವಿಸಿದರು. ಹೈದರಾಬಾದ್ ಗೋಪಿ ಚಂದ್ ಅಕಾಡಮಿಯಲ್ಲಿ ತರಬೇತಿ ಪಡೆದ ಪ್ರಣಯ್ ಮತ್ತು ಶ್ರೀಕಾಂತ್ ಮತ್ತೊಮ್ಮೆ ಎದುರಾಳಿಯಾಗಿದ್ದರು. ಕಳೆದ ವರ್ಷ ಸೀನಿಯರ್ ನ್ಯಾಶನಲ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಕಾಂತ್‌ರನ್ನು ಪ್ರಣಯ್ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News