ರಣಜಿ: ಕರ್ನಾಟಕ-ವಿದರ್ಭ ಪಂದ್ಯ ಡ್ರಾ

Update: 2018-11-15 18:24 GMT

ನಾಗ್ಪುರ, ನ.15: ಚಾಂಪಿಯನ್ ವಿದರ್ಭ ಹಾಗೂ ಕರ್ನಾಟಕ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಕರ್ನಾಟಕ 3 ಅಂಕ ಗಳಿಸಿದರೆ, ವಿದರ್ಭ ಒಂದು ಅಂಕಕ್ಕೆ ತೃಪ್ತಿಪಟ್ಟಿತು.

ನಾಲ್ಕನೇ ದಿನವಾದ ಗುರುವಾರ ಎರಡನೇ ಇನಿಂಗ್ಸ್‌ನಲ್ಲಿ 228 ರನ್‌ಗೆ ಆಲೌಟಾದ ವಿದರ್ಭ ತಂಡ ಕರ್ನಾಟಕದ ಗೆಲುವಿಗೆ 158 ರನ್ ಗುರಿ ನೀಡಿತ್ತು.

33 ಓವರ್‌ಗಳಲ್ಲಿ 76 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕರ್ನಾಟಕ ಸೋಲಿನ ಭೀತಿಯಲ್ಲಿತ್ತು. ಅಂತಿಮವಾಗಿ ಪಂದ್ಯ ಡ್ರಾಗೊಂಡ ಕಾರಣ ನಿಟ್ಟುಸಿರುಬಿಟ್ಟಿತು.

ಮೊದಲ ಇನಿಂಗ್ಸ್‌ನಲ್ಲಿ 71 ರನ್ ಹಿನ್ನಡೆ ಅನುಭವಿಸಿದ್ದ ವಿದರ್ಭ ನಾಲ್ಕನೇ ದಿನವನ್ನು 2 ವಿಕೆಟ್ ನಷ್ಟಕ್ಕೆ 72 ರನ್‌ನಿಂದ ಮುಂದುವರಿಸಿತು. ಕರ್ನಾಟಕದ ದಾಂಡಿಗ ಗಣೇಶ್ ಸತೀಶ್ ಸತತ ಎರಡನೇ ಬಾರಿ ತವರು ರಾಜ್ಯದ ವಿರುದ್ಧ ಅರ್ಧಶತಕ(79,164 ಎಸೆತ, 10 ಬೌಂಡರಿ)ಸಿಡಿಸಿದರು. ಸತೀಶ್‌ಗೆ ಅಪೂರ್ವ ವಾಂಖಡೆ(51, 75 ಎಸೆತ, 7 ಬೌಂಡರಿ) ಉತ್ತಮ ಸಾಥ್ ನೀಡಿದರು. ವಿದರ್ಭ 128 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ ಐದನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದ ಸತೀಶ್ ಹಾಗೂ ವಾಂಖಡೆ ತಂಡದ ಮೊತ್ತವನ್ನು 192ಕ್ಕೆ ತಲುಪಿಸಿದರು. ಸ್ಪಿನ್ನರ್ ಸುಚಿತ್ ಈ ಜೋಡಿಯನ್ನು ಬೇರ್ಪಡಿಸಿದರು. ಸತೀಶ್-ವಾಂಖಡೆ ನಿರ್ಗಮನದ ಬಳಿಕ ವಿದರ್ಭ ಕುಸಿತದ ಹಾದಿ ಹಿಡಿಯಿತು.84.4 ಓವರ್‌ಗಳಲ್ಲಿ 228 ರನ್‌ಗೆ ಸರ್ವಪತನವಾಯಿತು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದ ಸುಚಿತ್ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದರು. ಕರ್ನಾಟಕದ ಪರ 2ನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಸಮರ್ಥ್(30)ಹೊರತುಪಡಿಸಿ ಉಳಿದ ಆಟಗಾರರು ವಿಫಲರಾದರು. ಆದಿತ್ಯ ಸರ್ವಾಟೆ 24 ರನ್‌ಗೆ 4 ವಿಕೆಟ್‌ಗಳನ್ನು ಪಡೆದು ಕರ್ನಾಟಕವನ್ನು ಕಾಡಿದರು. ಲಲಿತ್ ಯಾದವ್(12ಕ್ಕೆ2)ಎರಡು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್

►ವಿದರ್ಭ ಮೊದಲ ಇನಿಂಗ್ಸ್: 307/10

►ಕರ್ನಾಟಕ ಮೊದಲ ಇನಿಂಗ್ಸ್: 378/10

►ವಿದರ್ಭ ಎರಡನೇ ಇನಿಂಗ್ಸ್: 84.4 ಓವರ್‌ಗಳಲ್ಲಿ 228/10

(ಗಣೇಶ್ ಸತೀಶ್ 79, ಅಪೂರ್ವ ವಾಂಖಡೆ 51, ಜಾಫರ್ 34, ಸುಚಿತ್ 5-70, ಪ್ರಸಿದ್ಧ ಕೃಷ್ಣ 2-58)

►ಕರ್ನಾಟಕ ಎರಡನೇ ಇನಿಂಗ್ಸ್:76/6

(ಸಮರ್ಥ್ 30, ಸಿದ್ದಾರ್ಥ್ 16,ಆದಿತ್ಯ ಸರ್ವಾಟೆ 4-24, ಲಲಿತ್ ಯಾದವ್ 2-12)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News