ತೆಲಂಗಾಣ ಚುನಾವಣೆ: ನಾಮಪತ್ರ ಸಲ್ಲಿಸಿದ ತೃತೀಯ ಲಿಂಗಿ

Update: 2018-11-20 14:31 GMT

ಹೈದರಾಬಾದ್,ನ.20: ಡಿಸೆಂಬರ್ ಏಳರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 32ರ ಹರೆಯದ ತೃತೀಯ ಲಿಂಗಿಯೊಬ್ಬರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಚಂದ್ರಮುಖಿ ಎಂಬವರು ಸಿಪಿಎಂ ನೇತೃತ್ವದ ಬಹುಜನ ಎಡರಂಗ ಅಥವಾ ಬಿಎಲ್‌ಎಫ್ ಅಭ್ಯರ್ಥಿಯಾಗಿ ಗೋಶಮಹಲ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮುಕೇಶ್ ಗೌಡ್ ಮತ್ತು ಬಿಜೆಪಿಯ ವಿವಾದಾತ್ಮಕ ನಾಯಕ ಟಿ.ರಾಜಾ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಓರ್ವ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಯಾವ ಪಕ್ಷವೂ ಮುಂದೆ ಬರಲಿಲ್ಲ. ಆದರೆ ಬಿಎಲ್‌ಎಫ್ ನನಗೆ ಟಿಕೆಟ್ ನೀಡಿತು ಮತ್ತು ನಾನು ನಾಮಪತ್ರ ಸಲ್ಲಿಸಿದೆ ಎಂದು ಚಂದ್ರಮುಖಿ ತಿಳಿಸಿದ್ದಾರೆ.

ಗೋಶಮಹಲ್ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿದಿರಿ ಎಂದು ಕೇಳಿದಾಗ, ಈ ಪ್ರದೇಶದಲ್ಲಿ ಉತ್ತರದ ಹೆಚ್ಚಿನ ಉದ್ಯಮ ಸಮುದಾಯವಿದೆ ಮತ್ತು ಈ ಸಮುದಾಯದ ಮಹಿಳೆಯರಿಗೆ ತೃತೀಯ ಲಿಂಗಿಗಳ ಸಮಸ್ಯೆಗಳ ಅರಿವಿದೆ ಎಂದು ಚಂದ್ರಮುಖಿ ತಿಳಿಸಿದ್ದಾರೆ. ಜನಿಸಿದಾಗ ಪುರುಷನಾಗಿದ್ದ ಚಂದ್ರಮುಖಿ ಹದಿನೈದು ವರ್ಷಗಳ ಹಿಂದೆ ಲಿಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಂದಿನಿಂದ ಅವರು ತೃತೀಯ ಲಿಂಗಿಗಳ ಜೊತೆ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News