ಸೈನಾ ನೆಹ್ವಾಲ್, ಕಶ್ಯಪ್ ಶುಭಾರಂಭ

Update: 2018-11-21 18:23 GMT

ಲಕ್ನೊ, ನ.21: ಡಿಸೆಂಬರ್‌ನಲ್ಲಿ ದಾಂಪತ್ಯ ಬದುಕಿಗೆ ಕಾಲಿಡಲಿರುವ ಸೈನಾ ನೆಹ್ವಾಲ್ ಹಾಗೂ ಪಾರುಪಲ್ಲಿ ಕಶ್ಯಪ್ ಬುಧವಾರ ಇಲ್ಲಿ ನಡೆದ ಸಯ್ಯದ್ ಮೋದಿ ವರ್ಲ್ಡ್‌ಟೂರ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ ್ಸನಲ್ಲಿ ಶುಭಾರಂಭ ಮಾಡಿದ್ದಾರೆ.

ಹಾಲಿ ಚಾಂಪಿಯನ್ ಪ್ರಣವ್ ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ ಮಿಶ್ರ ಡಬಲ್ಸ್‌ನ ಆರಂಭಿಕ ಪಂದ್ಯದಲ್ಲಿ ಎಡವಿದ್ದಾರೆ.

ಅಗ್ರ ಶ್ರೇಯಾಂಕದ ಪ್ರಣವ್ ಹಾಗೂ ಸಿಕ್ಕಿ ಕೇವಲ 31 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಚೀನಾದ ರೆನ್ ಕ್ಸಿಯಾಂಗ್‌ಯು ಹಾಗೂ ಝೌ ಚೊಮಿನ್ ವಿರುದ್ಧ 14-21, 11-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಇದೇ ವೇಳೆ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸೈನಾ ಮಾರಿಷಸ್‌ನ ಕಾಟೆ ಫೂ ಕ್ಯೂನ್ ವಿರುದ್ಧ 21-10, 21-10 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

 ಲಕ್ನೋದಲ್ಲಿ ಈ ಹಿಂದೆ ಮೂರು ಬಾರಿ ಪ್ರಶಸ್ತಿಯನ್ನು ಜಯಿಸಿರುವ ಸೈನಾ ಮುಂದಿನ ಸುತ್ತಿನಲ್ಲಿ ಸಹ ಆಟಗಾರ್ತಿ ಅಮೊಲಿಕಾ ಸಿಂಗ್ ಸಿಸೊಡಿಯಾರನ್ನು ಎದುರಿಸಲಿದ್ದಾರೆ. ಏಕಪಕ್ಷೀಯವಾಗಿ ಸಾಗಿದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಥಾಯ್ಲೆಂಡ್‌ನ ಟಾನಂಗ್‌ಸಕ್ ಸಾಯೆನ್‌ಸೊಂಬೂನ್‌ಸಕ್‌ರನ್ನು 21-14, 21-12 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಇಂಡೋನೇಶ್ಯಾದ ಫಿರ್ಮನ್ ಅಬ್ದುಲ್ ಖೋಲಿಕ್‌ರನ್ನು ಎದುರಿಸಲಿದ್ದಾರೆ.

 ಮಾಜಿ ಸಿಂಗಾಪುರ ಓಪನ್ ಚಾಂಪಿಯನ್ ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನ ಮೊದಲ ತಡೆ ದಾಟಿದ್ದಾರೆ. ಪ್ರಣೀತ್ ರಶ್ಯದ ಸರ್ಬಿ ಸಿರಾಂಟ್‌ರನ್ನು 21-12, 21-10 ಗೇಮ್‌ಗಳ ಅಂತರದಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ ಇಂಡೋನೇಶ್ಯಾದ ಶೆಸಾರ್ ಹಿರೆನ್‌ರನ್ನು ಎದುರಿಸಲಿದ್ದಾರೆ.

ಸಾರ್‌ಲಾರ್ಲೆಕ್ಸ್ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿರುವ ಶುಭಾಂಕರ್ ಡೇ ಸ್ವೀಡನ್‌ನ ಫೆಲಿಕ್ಸ್ ಬುರೆಸ್ಟ್‌ರನ್ನು 21-15, 21-13 ಗೇಮ್‌ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಚೀನಾದ ಲು ಗ್ವಾಂಗ್‌ಝುರನ್ನು ಎದುರಿಸಲಿದ್ದಾರೆ.

 ಮಾಜಿ ರಾಷ್ಟ್ರೀಯ ಚಾಂಪಿಯನ್ ಋತುಪರ್ಣೊ ದಾಸ್ ರಶ್ಯದ ನಟಾಲಿಯಾ ಪೆರ್ಮಿನ್‌ವೊವಾ ವಿರುದ್ಧ 21-19, 21-10 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದು, ಮುಂದಿನ ಸುತ್ತಿನಲ್ಲಿ ಶುೃತಿ ಮುಂಡಾಡರನ್ನು ಎದುರಿಸಲಿದ್ದಾರೆ.

ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಸಹ ಆಟಗಾರರಾದ ಕೃಷ್ಣಾಪ್ರಸಾದ್ ಗರಾಗ್ ಹಾಗೂ ಋತುಪರ್ಣ ಪಾಂಡಾ ವಿರುದ್ಧ ಮಿಕ್ಸೆಡ್ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 21-10, 21-10 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News