26/11 ದಾಳಿಕೋರರು ಮುಸ್ಲಿಮರನ್ನು ಬಿಟ್ಟು ಮುಗ್ಧರನ್ನು ಕೊಂದರು ಎಂದ ಮೇಘಾಲಯ ರಾಜ್ಯಪಾಲ
ಶಿಲ್ಲಾಂಗ್, ನ.26: ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಅವರು 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ತಪ್ಪು ತಪ್ಪಾದ ಹಾಗೂ ಅಸಂವೇದಿತನದಿಂದ ಕೂಡಿದ ಟ್ವೀಟ್ ಮಾಡಿ ವಿವಾದಕ್ಕಿಡಾಗಿದ್ದಾರೆ.
ಮುಂಬೈ ದಾಳಿಯ ಹತ್ತನೇ ವರ್ಷದ ದಿನವಾದ ಇಂದು ಟ್ವೀಟ್ ಮಾಡಿದ ರಾಯ್ “ಪಾಕ್ ಪ್ರವರ್ತಿತ ಹತ್ಯಾಕಾಂಡದಲ್ಲಿ ಹಲವಾರು ಮುಗ್ಧರು (ಮುಸ್ಲಿಮರನ್ನು ಹೊರತುಪಡಿಸಿ) ಸಾವನ್ನಪ್ಪಿದ ದಿನದ 10ನೇ ವರ್ಷವಿದು. ಪಾಕಿಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ನಾವು ಕಡಿಮೆಗೊಳಿಸಿಲ್ಲವೇಕೆಂದು (ಇಂತಹ ಸಂಬಂಧಗಳನ್ನು ಮುರಿಯುವುದು ಅಥವಾ ಯುದ್ಧಕ್ಕೆ ಹೋಗುವುದು ಬಿಡಿ) ಯಾರಿಗಾದರೂ ನೆನಪಿದೆಯೇ,'' ಎಂದು ಅವರು ಟ್ವೀಟ್ ಮಾಡಿದ್ದರು.
ಸುದ್ದಿ ಸಂಸ್ಥೆಯೊಂದು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ತಮ್ಮ ಹೇಳಿಕೆ ವಾಪಸ್ ಪಡೆಯಲು ನಿರಾಕರಿಸಿದ ಅವರು, ಹತ್ಯೆಗೀಡಾದ ಮುಸ್ಲಿಮರ ಹೆಸರುಗಳು ಹಾಗೂ ಸ್ಥಳಗಳ ಬಗ್ಗೆ ಮಾಹಿತಿ ಕೇಳಿದರಲ್ಲದೆ, ತಾನು ಹೇಳಿದ್ದು ಸಂವೇದಿತನದಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತಮಗೆ ಚಿಂತೆಯಿಲ್ಲ ಎಂದು ಬಿಟ್ಟರು.
ಆದರೆ ಅವರ ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾದ ನಂತರ ತಮ್ಮ ಹೇಳಿಕೆಯಿಂದ ಹಿಂದೆ ಸರಿದ ಅವರು ``ದಾಳಿಯಲ್ಲಿ ಹತ್ಯೆಗೀಡಾದವರೆಲ್ಲರ ರಕ್ತದ ಬಣ್ಣ ಒಂದೇ"' ಎಂದು ಹೇಳಿದರು.
``ಪಾಕ್ ಪ್ರವರ್ತಿತ ಉಗ್ರರು ಮುಸ್ಲಿಮರನ್ನು ಬಿಟ್ಟು ಬಿಟ್ಟಿದ್ದಾರೆಂದು ನನಗೆ ತಪ್ಪು ಮಾಹಿತಿ ನೀಡಲಾಗಿತ್ತು. ಆದರೆ ವಾಸ್ತವವಾಗಿ ಮುಸ್ಲಿಮರನ್ನೂ ಹತ್ಯೆಗೈಯ್ಯಲಾಗಿತ್ತು. ನನ್ನ ತಪ್ಪಿಗೆ ಕ್ಷಮೆ ಕೋರುತ್ತೇನೆ. ನನ್ನ ಟ್ವೀಟ್ ಡಿಲೀಟ್ ಮಾಡಲಾಗಿದೆ,'' ಎಂದು ರಾಯ್ ಬರೆದಿದ್ದಾರೆ.
ಮುಂಬೈ ದಾಳಿಯಲ್ಲಿ 44 ಮುಸ್ಲಿಮರು ಸಾವನ್ನಪ್ಪಿ 35 ಮಂದಿ ಗಾಯಗೊಂಡಿದ್ದರು. ದಾಳಿಗೆ ಒಟ್ಟು 166 ಮಂದಿ ಬಲಿಯಾಗಿದ್ದರು.