ಪತಿಯ ಅಕೌಂಟ್ ಸ್ಟೇಟ್‌ಮೆಂಟ್ ನ್ನು ಅನುಮತಿಯಿಲ್ಲದೆ ಪತ್ನಿಗೆ ನೀಡಿದ ಬ್ಯಾಂಕಿಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

Update: 2018-12-10 05:36 GMT

ಅಹ್ಮದಾಬಾದ್, ಡಿ.10: ವ್ಯಕ್ತಿಯೊಬ್ಬನ ಮೂರು ವರ್ಷಗಳ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್ ಅನ್ನು ಆತನ ಪತ್ನಿಗೆ ಆತನ ಅನುಮತಿಯಿಲ್ಲದೆ ನೀಡಿದ ಇಂಡಿಯನ್ ಓವರ್‌ಸೀಸ್ ಬ್ಯಾಂಕಿಗೆ ಅಹ್ಮದಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ರೂ 10,000 ದಂಡ ವಿಧಿಸಿದೆ.

ಬ್ಯಾಂಕಿನ ಸರ್ದಾರ್‌ ನಗರ್-ಹನ್ಸೋಲ್ ಶಾಖೆಯಲ್ಲಿ ಖಾತೆ ಹೊಂದಿರುವ ದಿನೇಶ್ ಪಮ್ನಾನಿ ಎಂಬವರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ತಮ್ಮ ಪತ್ನಿಗೆ ನೀಡಿದ್ದಕ್ಕೆ ಆಕ್ಷೇಪಿಸಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ತನ್ನ ವೈವಾಹಿಕ ವಿವಾದವೊಂದು ಕುಟುಂಬ ನ್ಯಾಯಾಲಯದಲ್ಲಿ ಬಾಕಿಯಿದ್ದು ತನ್ನ ಪತ್ನಿ ತನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಅವಳ ಲಾಭಕ್ಕಾಗಿ ನ್ಯಾಯಾಲಯದೆದುರು ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಪಮ್ನಾನಿ ಗ್ರಾಹಕ ವೇದಿಕೆಯ ಮುಂದೆ ವಾದಿಸಿದರಲ್ಲದೆ ತನ್ನ ಹಣಕಾಸು ವಿವರಗಳನ್ನು ಪತ್ನಿಗೆ ತಿಳಿಸಬಾರದೆಂಬ ತನ್ನ ಪ್ರಯತ್ನಗಳು ಬ್ಯಾಂಕಿನ ಕ್ರಮದಿಂದ ವಿಫಲವಾಗಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಮೇ 6ರಂದು ಪಮ್ನಾನಿಯ ಖಾತೆಯಿಂದ ರೂ.103 ಅನ್ನು ಕಡಿತಗೊಳಿಸಲಾಗಿದೆ ಎಂಬ ಸಂದೇಶ ಅವರ ಮೊಬೈಲ್ ಫೋನಿಗೆ ಬಂದಿತ್ತು. ಈ ಬಗ್ಗೆ ಎರಡು ದಿನಗಳ ನಂತರ ಅವರು ಬ್ಯಾಂಕಿನಲ್ಲಿ ವಿಚಾರಿಸಿದಾಗ ಅವರ ಪತ್ನಿ ಹರ್ಷಿಕಾ ಅವರು ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್ ಕೇಳಿದ್ದರಿಂದ ಅದರ ಶುಲ್ಕ ವಿಧಿಸಲಾಗಿದೆ ಎಂಬ ಮಾಹಿತಿ ದೊರಕಿತ್ತು.

ತನ್ನ ಪರವಾಗಿ ಯಾವುದೇ ವ್ಯವಹಾರ ನಡೆಸಲು ತಾನು ಪತ್ನಿಗೆ ಅಧಿಕಾರ ನೀಡಿಲ್ಲ ಎಂದು ಪಮ್ನಾನಿ ಬ್ಯಾಂಕ್ ಕ್ರಮಕ್ಕೆ ಆಕ್ಷೇಪಿಸಿದರಲ್ಲದೆ ಕರ್ತವ್ಯಲೋಪ ಆರೋಪ ಹೊರಿಸಿ ಬ್ಯಾಂಕಿನ ವಿರುದ್ಧ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.

ಖಾತೆದಾರನ ಅನುಮತಿಯಿಲ್ಲದೆ ಮೂರನೇ ವ್ಯಕ್ತಿಗೆ ಬ್ಯಾಂಕ್ ಯಾವುದೇ ಮಾಹಿತಿ ನೀಡುವ ಹಾಗಿಲ್ಲ ಹಾಗೂ ಬ್ಯಾಂಕಿನ ಕ್ರಮ ಗ್ರಾಹಕನ ಖಾಸಗಿತನಕ್ಕೆ ದಕ್ಕೆ ತಂದಿದೆ ಎಂದು ಪಮ್ನಾನಿ ಅವರ ವಕೀಲ ಸಿ.ಎ.ಮೋದಿ ವಾದಿಸಿದ್ದರು.

ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳಂತೆ ಪಮ್ನಾನಿಯ ಅನುಮತಿಯಿಲ್ಲದೆ ಅವರ ಖಾತೆ ವಿವರಗಳನ್ನು ಪತ್ನಿಗೆ ನೀಡುವ ಹಾಗಿಲ್ಲ ಎಂದು ಗ್ರಾಹಕ ವೇದಿಕೆ ತೀರ್ಪು ನೀಡಿ ಗ್ರಾಹಕನಿಗೆ ಉಂಟಾದ ಮಾನಸಿಕ ಯಾತನೆ ಹಾಗೂ ಕೋರ್ಟ್ ವೆಚ್ಚಕ್ಕೆ ಪರಿಹಾರವಾಗಿ ರೂ.10,000 ಪಾವತಿಸುವಂತೆ ಬ್ಯಾಂಕಿಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News