ಗಾಂಧಿ, ನೆಹರೂ ಪ್ರಾರಂಭಿಸಿದ 'ಸಂಡೆ ನವಜೀವನ್'ಗೆ ಮತ್ತೆ ಚಾಲನೆ

Update: 2018-12-10 06:41 GMT

ಹೊಸದಿಲ್ಲಿ, ಡಿ.10: ಮಹಾತ್ಮ ಗಾಂಧಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರು 71 ವರ್ಷಗಳ ಹಿಂದೆ ಪ್ರಾರಂಭಿಸಿದ್ದ 'ಸಂಡೆ ನವಜೀವನ್' ಪತ್ರಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್ 10ರಂದು ಪಂಜಾಬ್ ರಾಜ್ಯದ ಮೊಹಾಲಿಯ ಜಿಎಂಎಡಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಮರು ಚಾಲನೆಗೊಳಿಸಲಿದ್ದಾರೆ. ಮಹಾತ್ಮ ಗಾಂಧಿಯ 150ನೇ ಜಯಂತಿಯ ಸ್ಮರಣಾರ್ಥ ಪತ್ರಿಕೆಯ ವಿಶೇಷ ಪುರವಣಿಯನ್ನೂ ಈ ಸಂದರ್ಭ ಬಿಡುಗಡೆಗೊಳಿಸಲಾಗುತ್ತಿದೆ.

ಸಂಡೆ ನವಜೀವನ್ ಪತ್ರಿಕೆಯನ್ನು ಪಂಡಿತ್ ನೆಹರೂ ಸ್ಥಾಪಿಸಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮುಖಾಂತರ ನವೆಂಬರ್ 1, 1947ರಂದು ಆರಂಭಿಸಲಾಗಿತ್ತು. ಸಮಾರಂಭದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಅಧ್ಯಕ್ಷ ಮೋತಿಲಾಲ್ ವೋರಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಸಂಪಾದಕ ಝಫರ್ ಆಘಾ, ಹಿರಿಯ ಸಂಪಾದಕೀಯ ಸಲಹೆಗಾರ್ತಿ ಮೃಣಾಲ್ ಪಾಂಡೆ ಹಾಗೂ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹಾತ್ಮ ಗಾಂಧಿಯ ಸಿದ್ಧಾಂತ ಹಾಗೂ ತತ್ವಗಳನ್ನು ಪ್ರಚುರಪಡಿಸುವ ಉದ್ದೇಶದ ಜತೆಗೆ ಆಧುನಿಕ ಭಾರತದ ಬಗ್ಗೆ ನೆಹರೂ ಅವರಿಗಿದ್ದ ಪರಿಕಲ್ಪನೆಯನ್ನೂ ಅದು ಉತ್ತೇಜಿಸುವ ಉದ್ದೇಶ ಹೊಂದಿತ್ತು.

ಹಲವಾರು ಏಳು ಬೀಳುಗಳನ್ನು ಕಂಡಿದ್ದ ನವಜೀವನ್ ಪತ್ರಿಕೆಯನ್ನು ಮರುಚಾಲನೆಗೊಳಿಸುವ ನಿರ್ಧಾರವನ್ನು ಮಾರ್ಚ್ 2016ರಲ್ಲಿ ಕೈಗೊಳ್ಳಲಾಗಿತ್ತು. ಅದರ ಪ್ರಿಂಟ್ ಎಡಿಶನ್ ಅಕ್ಟೋಬರ್ 2018ರಿಂದ ಲಭ್ಯವಿದ್ದರೆ ಹಿಂದಿ ವೆಬ್ ತಾಣವನ್ನು ಆಗಸ್ಟ್ 2017ರಲ್ಲಿ ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News