ನಿಮ್ಮ ಮೊಬೈಲ್ ಗೆ ಈ ಸಂದೇಶ ಬಂದರೆ ಹುಷಾರಾಗಿರಿ !

Update: 2018-12-14 15:05 GMT

ಹೊಸದಿಲ್ಲಿ, ಡಿ.14: ಆದಾಯ ತೆರಿಗೆ ಇಲಾಖೆಯ ಹೆಸರಲ್ಲಿ ಹುಸಿ ಸಂದೇಶ ರವಾನೆಯಾಗಿರುವ ಬಗ್ಗೆ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ. ಆದಾಯ ತೆರಿಗೆ ಸಲ್ಲಿಕೆಯ ಕುರಿತು ತಮಗೆ ಬಂದಿರುವ ಈ ನಕಲಿ ಸಂದೇಶವನ್ನು ನಂಬಿ ಜನ ಟ್ವಿಟರ್‌ನಲ್ಲಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ.

  ಇ-ಫೈಲಿಂಗ್ ವ್ಯವಸ್ಥೆಯ ಮೂಲಕ ಆದಾಯ ತೆರಿಗೆ ಪಾವತಿಸಿದ ಸಂದರ್ಭ ನೀಡುವ ಫೋನ್ ನಂಬರ್ ಅನ್ನು ಬಳಸಿಕೊಂಡು ಈ ಸಂದೇಶ ಕಳುಹಿಸಿರುವ ಬಗ್ಗೆ ಶಂಕಿಸಲಾಗಿದೆ. ಈ ಸಂದೇಶದಲ್ಲಿ ವ್ಯಕ್ತಿಯ ಹೆಸರು, ಫೋನ್ ನಂಬರ್ ಎಲ್ಲಾ ಸರಿಯಾಗಿಯೇ ಇರುವ ಕಾರಣ ಇದು ಆದಾಯತೆರಿಗೆ ಇಲಾಖೆಯಿಂದ ಬಂದಿರುವ ಸಂದೇಶವೆಂದೇ ಜನತೆ ನಂಬುವ ಸಾಧ್ಯತೆಯಿದೆ.

 'ಪ್ರಿಯ ಪ್ರದೀಪ್ ಕೆ(ಇ-ಫೈಲಿಂಗ್ ವೆಬ್‌ಸೈಟ್‌ಗೆ ನೀಡಲಾದ ಫೋನ್ ನಂಬರ್‌ಗೆ ಸಂಪರ್ಕಿಸಿದ ಹೆಸರು), ನೀವು ಹಕ್ಕು ಸಾಧಿಸದ(ಅನ್‌ಕ್ಲೇಮ್), ತೆರಿಗೆ ಮರುಪಾವತಿ ಮೊತ್ತವಾಗಿರುವ 29,754 ರೂ.ಯನ್ನು ಪಡೆಯಲು ಅಗತ್ಯವಿರುವ ಅಧಿಕೃತ ಕೋರಿಕೆ ಅರ್ಜಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ 'ಎಂದು ಸಂದೇಶ ರವಾನೆಯಾಗಿದೆ. ಮತ್ತು ಕೆಳಗೆ ಸ್ಟೇಟ್‌ಬ್ಯಾಂಕ್‌ನ ನಕಲಿ ಆನ್‌ಲೈನ್ ವೆಬ್‌ಸೈಟ್‌ನ ಲಿಂಕ್ ನೀಡಲಾಗಿದೆ.

  ಈ ವೆಬ್‌ಸೈಟ್‌ಗೆ ಲಾಗಿನ್ ಆದರೆ ಆಗ ಎಸ್‌ಬಿಐ ಇಂಟರ್‌ನೆಟ್ ಬ್ಯಾಂಕಿಂಗ್‌ನ ಲಾಗಿನ್ ಮಾಹಿತಿಯನ್ನು ಹ್ಯಾಕರ್‌ಗಳು ಪಡೆಯುತ್ತಾರೆ. ಆದಾಯ ತೆರಿಗೆ ಇಲಾಖೆ ಯಾವತ್ತೂ ಜನರಿಂದ ಬ್ಯಾಂಕಿಂಗ್ ಲಾಗಿನ್ ಮಾಹಿತಿಯನ್ನು ಕೇಳುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

  

 ದೇಶದಲ್ಲಿ ವ್ಯಾಪಕವಾಗಿ ಚಲಾವಣೆಯಲ್ಲಿರುವ ಮೋಸಗಾರಿಕೆಯ ಮತ್ತೊಂದು ತಂತ್ರವೆಂದರೆ 'ಸಿಮ್ ಕಾರ್ಡ್ ಸ್ವಾಪ್' ವಿಧಾನ. ಇಲ್ಲಿ ಸಿಮ್‌ಕಾರ್ಡ್ ಬದಲಾವಣೆ ಎಂಬ ಕಾರಣ ನೀಡಿ ನಿಮ್ಮ ಫೋನ್ ನಂಬರ್‌ಗೆ ಹೊಸ ಸಿಮ್ ಕಾರ್ಡನ್ನು ನೋಂದಾಯಿಸಲಾಗುತ್ತದೆ. ನಿಮ್ಮ ಫೋನ್ ನಂಬರ್‌ಗೆ ಹೊಸ ಸಿಮ್ ಕಾರ್ಡ್ ಜೋಡಣೆಯಾದರೆ ಸಿಮ್ ಕಾರ್ಡ್ ಅಮಾನ್ಯವಾಗುತ್ತದೆ ಮತ್ತು ಫೋನ್ ಸಿಗ್ನಲ್‌ಗಳನ್ನು ಪಡೆಯುವುದು ಸ್ಥಗಿತಗೊಳ್ಳುತ್ತದೆ. ನಿಮ್ಮ ಫೋನ್ ನಂಬರ್ ವಂಚಕರಿಗೆ ಸಿಕ್ಕಿದರೆ, ಅವರಿಗೆ ನಿಮ್ಮ ಒಟಿಪಿ(ವನ್ ಟೈಮ್ ಪಾಸ್‌ವರ್ಡ್)ಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ, ಆನ್‌ಲೈನ್ ಶಾಪಿಂಗ್ ಮುಂತಾದವುಗಳನ್ನು ಮಾಡಬಹುದು.

ಇತ್ತೀಚೆಗೆ ನೋಯ್ಡಾದ ನಿವಾಸಿಯೊಬ್ಬನ ಎಸ್‌ಬಿಐ ಖಾತೆಯಲ್ಲಿದ್ದ 6.8 ಲಕ್ಷ ರೂ.ಗಳನ್ನು ಇಂಟರ್‌ನೆಟ್ ವಂಚಕರು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಬ್ಯಾಂಕಿಂಗ್ ಮೂಲಕ ಸಿಮ್ ಸ್ವಾಪ್ ನಡೆಸಿ ವರ್ಗಾಯಿಸಿಕೊಂಡಿದ್ದರು. ತನ್ನಲ್ಲಿ ಸ್ಮಾರ್ಟ್‌ಫೋನ್ ಇಲ್ಲ ಎಂದು ಈ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಕಳೆದ ಎರಡು ತಿಂಗಳಲ್ಲಿ ಯುಪಿಐ ಆ್ಯಪ್ ಬಳಸಿಕೊಂಡು ವಂಚಕರು ಈತನ ಎಸ್‌ಬಿಐ ಖಾತೆಯಲ್ಲಿದ್ದ 6.8 ಲಕ್ಷ ರೂ ಹಣ ಲಪಟಾಯಿಸಿದ್ದಾರೆ. ಬ್ಯಾಂಕಿನಿಂದ ಹಣ ಹಿಂಪಡೆಯಲು ತೆರಳಿದಾಗಲಷ್ಟೇ ತನಗಾದ ಮೋಸದ ಬಗ್ಗೆ ಈತನಿಗೆ ತಿಳಿದಿದೆ. ಬಳಿಕ ಈತ ಪೊಲೀಸರಿಗೆ ದೂರು ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News