ಅಸ್ಸಾಂ ನಾಗರಿಕರ ನೋಂದಣಿ ಪ್ರಕ್ರಿಯೆಯಿಂದ ಜನಾಂಗೀಯ ಸಂಘರ್ಷದ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

Update: 2018-12-17 17:21 GMT

ಹೊಸದಿಲ್ಲಿ,ಡಿ.17: ವಿಶ್ವಸಂಸ್ಥೆಯ ಮೂವರು ತಜ್ಞರು ಮತ್ತು ಅನಿಯಂತ್ರಿತ ಬಂಧನ ಗುಂಪಿನ ಉಪಾಧ್ಯಕ್ಷರು ಅಸ್ಸಾಂನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಈ ಕುರಿತು ಭಾರತ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕಳೆದ ಜೂನ್‌ನಲ್ಲಿ ಮೊದಲ ಬಾರಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವ ತಜ್ಞರು, ಅಸ್ಸಾಂನಲ್ಲಿ ಅಲ್ಪಸಂಖ್ಯಾತ ಬೆಂಗಾಳಿ ಮುಸ್ಲಿಮರ ಮಧ್ಯೆ ಹೆಚ್ಚುತ್ತಿರುವ ಆತಂಕ ಮತ್ತು ಚಿಂತೆಯ ಬಗ್ಗೆ ತಿಳಿಸಿದ್ದರು. ಈ ಕುರಿತು 60 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಅವರು ಸರಕಾರಕ್ಕೆ ಸೂಚಿಸಿದ್ದರು. ಆದರೆ ಸರಕಾರ ಪ್ರತಿಕ್ರಿಯಿಸಿರಲಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಎನ್‌ಆರ್‌ಸಿ ಪ್ರಕ್ರಿಯೆ ನಡೆಯುತ್ತಿರುವ ರೀತಿಯನ್ನು ಕಂಡಾಗ ಅದರಿಂದ ಬಹಳಷ್ಟು ಮುಸ್ಲಿಮರು ಮತ್ತು ಬೆಂಗಾಳಿ ಮೂಲದ ವ್ಯಕ್ತಿಗಳು ಹಾಗೂ ಇತರ ಅಲ್ಪಸಂಖ್ಯಾತರನ್ನು ಬಾಧಿಸಲಿದೆ ಎಂಬ ಆತಂಕ ನಮ್ಮದಾಗಿದೆ. ಅಸ್ಸಾಂನಲ್ಲಿ ಇವರನ್ನು ಐತಿಹಾಸಿಕವಾಗಿ ಮತ್ತು ಈಗಲೂ ವಿದೇಶಿಗರು ಮತ್ತು ಅಕ್ರಮ ವಲಸಿಗರು ಎಂದು ಭಾವಿಸಲಾಗಿರುವ ಕಾರಣ ಅವರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಡಿಸೆಂಬರ್ 13ರಂದು ಎರಡನೇ ಬಾರಿ ಬರೆದ ಪತ್ರದಲ್ಲಿ ತಜ್ಞರು ಅಭಿಪ್ರಾಯಿಸಿದ್ದಾರೆ.

ಜುಲೈ 30ರಂದು ಬಿಡುಗಡೆಯಾದ ನೋಂದಣಿಯ ಅಂತಿಮ ಕರಡಿನಲ್ಲಿ ಕೆಲವು ಶಾಸಕರು ಮತ್ತು ಓರ್ವ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸುಮಾರು 40 ಲಕ್ಷ ಜನರನ್ನು ಹೊರಗಿಡಲಾಗಿತ್ತು. ಪಟ್ಟಿಯಲ್ಲಿ ಸೇರದವರು ಇದೀಗ ವಿದೇಶಿಗರ ಟ್ರಿಬ್ಯುನಲ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿದೆ, ವಿಫಲವಾದಲ್ಲಿ ಅನಿಯಮಿತ ಬಂಧನಕ್ಕೆ ಒಳಗಾಗಬೇಕಿದೆ. ಆಕ್ಷೇಪಣೆಗಳು ಮತ್ತು ಪೌರತ್ವ ರುಜುವಾತು ಪ್ರಕ್ರಿಯೆ ನಡೆಯುತ್ತಿದ್ದು ಡಿಸೆಂಬರ್ 31ರ ವರೆಗೆ ಮುಂದುವರಿಯಲಿದೆ. ಫೆಬ್ರವರಿ 15ರಂದು ಅಧಿಕಾರಿಗಳನ್ನು ಅವುಗಳನ್ನು ಪರಿಶೀಲಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News