ವಿಶ್ವ ಆರ್ಥಿಕತೆಯು ಬೆಳೆಯುತ್ತಿದ್ದಾಗ ನೋಟು ನಿಷೇಧದಿಂದ ಭಾರತದ ಬೆಳವಣಿಗೆ ಕುಂಠಿತಗೊಂಡಿತ್ತು

Update: 2018-12-17 17:35 GMT

ಹೊಸದಿಲ್ಲಿ,ಡಿ.17: ವಿಶ್ವ ಆರ್ಥಿಕತೆಯು ಬೆಳೆಯುತ್ತಿದ್ದಾಗ ನೋಟು ನಿಷೇಧವು ಭಾರತದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿತ್ತು ಮತ್ತು ಇದು ಜಿಡಿಪಿಯ ಮೇಲೆ ಗಣನೀಯ ಪ್ರತಿಕೂಲ ಪರಿಣಾಮವನ್ನುಂಟು ಮಾಡಿತ್ತು ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ.

ನೋಟು ನಿಷೇಧವು ಭಾರತದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿತ್ತು ಎನ್ನುವುದನ್ನು ಪುನರ್‌ದೃಢೀಕರಿಸುವ ವರದಿಗಳನ್ನು ತಾನು ನೋಡಿದ್ದೇನೆ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

2017ರಲ್ಲಿ ವಿಶ್ವ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದರೆ ನಮ್ಮ ಆರ್ಥಿಕ ಪ್ರಗತಿ ನಿಧಾನಗೊಂಡಿತ್ತು ಎಂದು ಹೇಳಿದ ರಾಜನ್,ನೋಟು ನಿಷೇಧ ಮತ್ತು ಜಿಎಸ್‌ಟಿ ಅನುಷ್ಠಾನ ಭಾರತದ ಬೆಳವಣಿಗೆಗೆ ಹೊಡೆತ ನೀಡಿದ್ದವು. ಅಂದ ಹಾಗೆ ತಾನು ಜಿಎಸ್‌ಟಿ ವಿರೋಧಿಯಲ್ಲ,ಸುದೀರ್ಘಾವಧಿಯಲ್ಲಿ ಅದು ಉತ್ತಮ ಪರಿಕಲ್ಪನೆಯಾಗಿದೆ. ಆದರೆ ಅದನ್ನು ಅವಸರದಲ್ಲಿ ಅನುಷ್ಠಾನಗೊಳಿಸಲಾಗಿತ್ತು ಎಂದರು.

ಆರ್‌ಬಿಐ ಗವರ್ನರ್ ಆಗಿ ನಿಮ್ಮ ಅಧಿಕಾರಾವಧಿಯಲ್ಲಿ ನೋಟು ನಿಷೇಧವನ್ನು ಜಾರಿಗೊಳಿಸುವಂತೆ ನಿಮಗೆ ಸೂಚಿಸಲಾಗಿತ್ತೇ ಎಂಬ ಪ್ರಶ್ನೆಗೆ,ತನ್ನ ಅಭಿಪ್ರಾಯವನ್ನು ಕೋರಲಾಗಿತ್ತು ಮತ್ತು ಅದು ಒಳ್ಳೆಯ ಕಲ್ಪನೆಯಲ್ಲ ಎನ್ನುವುದು ತನ್ನ ಅಭಿಪ್ರಾಯವಾಗಿತ್ತು ಎಂದು ರಘುರಾಮ ರಾಜನ್ ಉತ್ತರಿಸಿದರು.

ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನೂ ಬಹಳ ಉತ್ತಮ ರೀತಿಯಲ್ಲಿ ಜಾರಿಗೊಳಿಸಬಹುದಿತ್ತು ಮತ್ತು ಜಿಎಸ್‌ಟಿಯು ಐದು ವಿವಿಧ ತೆರಿಗೆ ಹಂತಗಳ ಬದಲು ಒಂದೇ ತೆರಿಗೆ ದರವನ್ನು ಹೊಂದಿರಬೇಕೇ ಎನ್ನುವುದು ಚರ್ಚೆಯ ವಿಷಯವಾಗಿದೆ ಎಂದರು.

ಬ್ಯಾಂಕುಗಳ ಕೆಟ್ಟ ಸಾಲಗಳು ಮತ್ತು ವಂಚಕರ ಕುರಿತಂತೆ ಅವರು,ತನ್ನ ಅಧಿಕಾರಾವಧಿಯಲ್ಲಿ ಬ್ಯಾಂಕ್ ವಂಚನೆಗಳ ಮೇಲೆ ನಿಗಾ ಘಟಕವನ್ನು ಆರ್‌ಬಿಐ ಸ್ಥಾಪಿಸಿತ್ತು. ಗಣ್ಯರು ಒಳಗೊಂಡಿದ್ದ ವಂಚನೆ ಪ್ರಕರಣಗಳ ಪಟ್ಟಿಯೊಂದನ್ನು ಸಹ ತಾನು ಪ್ರಧಾನಿ ಕಚೇರಿಗೆ ಕಳುಹಿಸಿದ್ದೆ ಮತ್ತು ಕನಿಷ್ಠ ಒಂದಿಬ್ಬರ ವಿರುದ್ಧವಾದರೂ ಪ್ರಕರಣ ದಾಖಲಿಸುವಂತಾಗಲು ಬ್ಯಾಂಕಿನೊಂದಿಗೆ ಸಮನ್ವಯಕ್ಕಾಗಿ ಆಗ್ರಹಿಸಿದ್ದೆ. ಆದರೆ ಈ ನಿಟ್ಟಿನಲ್ಲಿ ಏನಾದರೂ ಪ್ರಗತಿಯಾಗಿದೆಯೇ ಎನ್ನುವುದು ತನಗೆ ಗೊತ್ತಿಲ್ಲ. ಇದು ತುರ್ತು ಗಮನ ಹರಿಸಬೇಕಿರುವ ವಿಷಯವಾಗಿದೆ. ಒಬ್ಬನು ನುಣುಚಿಕೊಂಡರೆ ಇತರರೂ ಆತನನ್ನು ಅನುಸರಿಸಬಹುದು ಎನ್ನುವುದು ತನ್ನ ಕಳವಳಕ್ಕೆ ಕಾರಣವಾಗಿದೆ ಎಂದರು.

ಸಾಲ ಸುಸ್ತಿದಾರನಿಗೂ ವಂಚಕನಿಗೂ ವ್ಯತ್ಯಾಸವಿದೆ ಎಂದು ಹೇಳಿದ ಅವರು,ಸುಸ್ತಿದಾರರನ್ನು ಜೈಲಿಗೆ ಕಳುಹಿಸಲು ಆರಂಭಿಸಿದರೆ ಯಾರೂ ಸಾಲದ ಪಡೆಯುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News