×
Ad

ಪ್ರೀತಿಗಾಗಿ ಗಡಿ ದಾಟಿ ಪಾಕ್ ಜೈಲು ಸೇರಿದ ಭಾರತದ ಹಮೀದ್ ಕೊನೆಗೂ ಬಿಡುಗಡೆ

Update: 2018-12-17 23:15 IST

ಹೊಸದಿಲ್ಲಿ,ಡಿ.17: ಅಕ್ರಮವಾಗಿ ಗಡಿ ದಾಟಿದ ಕಾರಣಕ್ಕೆ 2012ರಲ್ಲಿ ಪಾಕಿಸ್ತಾನ ನ್ಯಾಯಾಲಯದಿಂದ ಮೂರು ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ ಮುಂಬೈಯ ಹಮೀದ್ ನಹಲ್ ಅನ್ಸಾರಿಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.

ಸೋಮವಾರ ಜೈಲುಶಿಕ್ಷೆ ಪೂರ್ಣಗೊಳಿಸಿದ ಅವರನ್ನು ಮಂಗಳವಾರದೊಳಗೆ ಸ್ವದೇಶಕ್ಕೆ ಕಳುಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಅಫ್ಘಾನಿಸ್ತಾನದಿಂದ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದ ಅನ್ಸಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನದ ನಕಲಿ ಗುರುತಿನ ಚೀಟಿಯನ್ನು ಹೊಂದಿದ್ದಕ್ಕಾಗಿ ಅಲ್ಲಿನ ಸೇನಾ ನ್ಯಾಯಾಲಯ 2015ರ ಡಿಸೆಂಬರ್ 15ರಂದು ಅನ್ಸಾರಿಗೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಅನ್ಸಾರಿಯನ್ನು ಪೇಶಾವರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಹಿರಿಯ ವಕೀಲರ ಮೂಲಕ ಅನ್ಸಾರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಧೀಶ ರೂಹುಲ್ ಅಮೀನ್ ಮತ್ತು ನ್ಯಾಯಾಧೀಶ ಕಲಂದರ್ ಅಲಿ ಖಾನ್ ನೇತೃತ್ವದ ಪೇಶಾವರ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಗುರುವಾರ ನಡೆಸಿತು. ತನ್ನ ಮನವಿಯಲ್ಲಿ, ಸರಕಾರ ತನ್ನ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನ್ಸಾರಿ ಆರೋಪಿಸಿದ್ದರು. ಅನ್ಸಾರಿ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ, ಅವಧಿ ಮುಗಿದ ನಂತರ ಕೈದಿಯನ್ನು ಯಾಕೆ ಬಂಧನದಲ್ಲಿಡಲಾಗುತ್ತಿದೆ ಎನ್ನುವುದನ್ನು ವಿವರಿಸುವಂತೆ ಹೆಚ್ಚುವರಿ ಅಟರ್ನಿ ಜನರಲ್‌ಗೆ ಸೂಚಿಸಿತ್ತು. ಒಂದು ತಿಂಗಳ ಒಳಗಾಗಿ ಅನ್ಸಾರಿಯನ್ನು ಬಿಡುಗಡೆಗೊಳಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು. ನಂತರ ಆಂತರಿಕ ಸಚಿವಾಲಯದ ಪರವಾಗಿ ಹೇಳಿಕೆ ನೀಡಿದ ಸಹಾಯಕ ಅಟರ್ನಿ ಜನರಲ್, ಅನ್ಸಾರಿಯನ್ನು ಅವಧಿ ಮುಗಿದ ಕೂಡಲೇ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News