ದೇಶದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ನನಗೆ ಆತಂಕವಿದೆ: ಸೋನು ನಿಗಮ್

Update: 2018-12-25 16:24 GMT

ಹೊಸದಿಲ್ಲಿ, ಡಿ.25: ‘ಮೀ ಟೂ’ ಅಭಿಯಾನ ಹಾಗೂ ಪಾಕಿಸ್ತಾನದ ಹಾಡುಗಾರರ ಕುರಿತ ಹೇಳಿಕೆಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಗಾಯಕ ಸೋನು ನಿಗಮ್, ದೇಶದ ಸಿಟ್ಟಿನ ಕುರಿತು ತಾನು ಆತಂಕಿತನಾಗಿದ್ದೇನೆ ಎಂದು ಹೇಳಿದ್ದಾರೆ. ದೇಶದಲ್ಲಿ ಇರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ನನಗೆ ಬಹಳ ಆತಂಕವಿದೆ. ಸ್ವಲ್ಪವಾದರೂ ಶಿಷ್ಟಾಚಾರದ ಅಗತ್ಯವಿದೆ. ಜನತೆ ನಗುತ್ತಾ ತುಸು ಮಟ್ಟಿಗಾದರೂ ನೆಮ್ಮದಿಯಿಂದ ಬದುಕಬೇಕು ಎಂದು ತಾನು ಇಚ್ಚಿಸುವುದಾಗಿ ಸೋನು ನಿಗಮ್ ಹೇಳಿದ್ದಾರೆ.

ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ನಂಬಲು ಸಾಧ್ಯವಾಗದ ರೀತಿಯ ನುಡಿಗಳನ್ನು ಜನರು ಆಡುತ್ತಿದ್ದಾರೆ. ಮಾತನಾಡುವಾಗ ತುಸು ಮಟ್ಟಿಗಾದರೂ ಸಭ್ಯತೆ, ಶಿಷ್ಟಾಚಾರದ ಅಗತ್ಯವಿದೆ ಎಂದಿದ್ದಾರೆ. “ನನಗೆ ತಿಳಿದಿರುವುದರ ಬಗ್ಗೆ ಅಥವಾ ನಾನು ವಿಶ್ವಾಸ ಇರಿಸಿರುವ ವಿಷಯದ ಬಗ್ಗೆ ನಾನು ಮಾತನಾಡುತ್ತೇನೆ. ಕಣ್ಣಿಗೆ ಕಣ್ಣು ಎಂಬ ವ್ಯವಹಾರದಲ್ಲಿ ನನಗೆ ವಿಶ್ವಾಸವಿಲ್ಲ. ಈ ರೀತಿಯ ವರ್ತನೆ ಗುಂಪು ಹಲ್ಲೆಯಿಂದ ಆಗುವ ಹತ್ಯೆ, ರಸ್ತೆಯಲ್ಲಿ ನಡೆಯುವ ಹಿಂಸಾಚಾರಕ್ಕೆ ಕಾರಣವಾಗುತ್ತದೆ” ಎಂದು ಸೋನು ನಿಗಮ್ ಹೇಳಿದರು. ಇತ್ತೀಚೆಗೆ ಮಾಧ್ಯಮ ಸಮಾವೇಶವೊಂದರಲ್ಲಿ ಮಾತನಾಡಿದ್ದ ಸೋನು ನಿಗಮ್, ತಾನು ಪಾಕಿಸ್ತಾನದ ಪ್ರಜೆಯಾಗಿದ್ದರೆ ಭಾರತದಲ್ಲಿ ಹೆಚ್ಚಿನ ಅವಕಾಶ ದೊರಕುತ್ತಿತ್ತು ಎಂಬ ಹೇಳಿಕೆ ನೀಡಿದ್ದರು.

 ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ್ದ ಅವರು, ದೇಶದಲ್ಲಿ ಗಾಯನ ಉದ್ಯಮದ ಕಾರ್ಯನಿರ್ವಹಣೆಯ ಕುರಿತ ಪ್ರಶ್ನೆಗೆ ತಾನು ಉತ್ತರಿಸುತ್ತಿದ್ದೆ. ಈ ದಿನಗಳಲ್ಲಿ ಸಂಗೀತ ಸಂಸ್ಥೆಗಳು ಗಾಯಕರ ಸ್ವಾಮಿತ್ವ ಪಡೆಯಲು ಬಯಸುತ್ತಿವೆ. ಗಾಯಕರು ಉತ್ತಮ ಸಾಧನೆ ತೋರಿದಾಗ ಅದರಿಂದ ಲಾಭ ಪಡೆಯುವ ಉದ್ದೇಶ ಹೊಂದಿವೆ. ಈ ನಿಯಮ ಭಾರತೀಯ ಗಾಯಕರಿಗೆ ಮಾತ್ರ ಅನ್ವಯಿಸುತ್ತದೆ. ಪಾಕಿಸ್ತಾನದ ಗಾಯಕರಿಗೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ತಾನು ಆ ರೀತಿ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಮೀ ಟೂ ಅಭಿಯಾನಕ್ಕೆ ಧ್ವನಿಗೂಡಿಸಿದ್ದ ಗಾಯಕಿ ಸೋನಾ ಮೊಹಾಪಾತ್ರ, ಖ್ಯಾತ ಸಂಗೀತ ನಿರ್ದೇಶಕ ಅನು ಮಲಿಕ್ ವಿರುದ್ಧ ಆರೋಪ ಮಾಡಿದ್ದರು ಮತ್ತು ಅನು ಮಲಿಕ್ ಓರ್ವ ಸರಣಿ ಲೂಟಿಗಾರ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್ ‘ನನ್ನ ಮಿತ್ರ ಅನು ಮಲಿಕ್ ವಿರುದ್ಧ ಗೌರವಾನ್ವಿತ ಮಹಿಳೆ ಟ್ವಿಟರ್‌ನಲ್ಲಿ ಕಾರಿಕೊಳ್ಳುತ್ತಿದ್ದಾಳೆ. ನನ್ನ ಆತ್ಮೀಯ ಎಂದು ನಾನು ನಂಬಿರುವ ವ್ಯಕ್ತಿಯ ಪತ್ನಿಯಾಗಿರುವ ಈ ಮಹಿಳೆ ಈ ಅನ್ಯೋನ್ಯತೆಯನ್ನು ಮರೆತಿರಬಹುದು. ಆದರೆ ಕನಿಷ್ಟ ಸಭ್ಯತೆಯನ್ನು ಪಾಲಿಸಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದರು.

ಸಂಗೀತ ನಿರ್ದೇಶಕ ರಾಮ್ ಸಂಪತ್‌ರನ್ನು ವಿವಾಹವಾಗಿರುವ ಸೋನಾ ಮೊಹಾಪಾತ್ರ ಇದಕ್ಕೆ ಪ್ರತಿಕ್ರಿಯಿಸಿ, ತನ್ನ ಗುರುತಿನ ಬಗ್ಗೆ ತಿಳಿಸುವಾಗ ಇನ್ನೊಬ್ಬರ ಪತ್ನಿ ಎಂದು ಉಲ್ಲೇಖಿಸುವ ಅಗತ್ಯವಿರಲಿಲ್ಲ. ಈ ಹೇಳಿಕೆ ಸೋನುವಿನ ಮನಸ್ಥಿತಿ ಮತ್ತು ಜಗತ್ತಿನ ಕುರಿತ ಅವರ ದೃಷ್ಟಿಕೋನವನ್ನು ತಿಳಿಸುತ್ತದೆ ಎಂದು ಟೀಕಿಸಿದ್ದರು. ಅನು ಮಲಿಕ್ ವಿರುದ್ಧದ ಆರೋಪವನ್ನು ಉಲ್ಲೇಖಿಸಿರುವ ಸೋನು ನಿಗಮ್, ಅಪರಾಧಿಗೆ ಯಾವ ಶಿಕ್ಷೆಯಾಗಬೇಕೆಂದು ಜನಸಾಮಾನ್ಯರು ನಿರ್ಧರಿಸಬೇಕು ಎಂದು ಒಬ್ಬರು ಹೇಳಿದರೆ, ಇದನ್ನು ಕಾನೂನು ನಿರ್ಧರಿಸುತ್ತದೆ ಎಂದು ಮತ್ತೊಬ್ಬರು ಹೇಳುತ್ತಿದ್ದಾರೆ. ದೊಂಬಿಯ ಸಮಯದಲ್ಲಿ ಮಾತ್ರ ಜನಸಾಮಾನ್ಯರು ನ್ಯಾಯನಿರ್ಣಯ ಮಾಡಿ ಶಿಕ್ಷೆ ವಿಧಿಸುವ ಸ್ಥಿತಿ ಇರುತ್ತದೆ. ತನಗೂ ಇಬ್ಬರು ಸಹೋದರಿಯರು ಇದ್ದಾರೆ. ಮಹಿಳೆಯರಿಗೆ ತೊಂದರೆಯಾಗುವ ಯಾವುದೇ ಕಾರ್ಯವನ್ನು ತಾನು ಸಮರ್ಥಿಸುವುದಿಲ್ಲ. ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂಬುದು ತನ್ನ ಹೇಳಿಕೆಯ ಅರ್ಥವಾಗಿದೆ ಎಂದು ಹೇಳಿದ್ದಾರೆ.

 ಕಳೆದ ವರ್ಷದ ‘ಆಝಾನ್’ ವಿವಾದವನ್ನು ಉಲ್ಲೇಖಿಸಿದ ಅವರು, ಯಾವುದೇ ಧರ್ಮದ ವಿರುದ್ಧ ತಾನು ಮಾತಾಡಿಲ್ಲ. ಧ್ವನಿವರ್ಧಕ ಬಳಸುವ ಬಗ್ಗೆ ಹೇಳಿಕೆ ನೀಡಿದ್ದೆ. ಆದರೆ ಮರುದಿನ ಸುದ್ದಿಮಾಧ್ಯಮಗಳಲ್ಲಿ ‘ಆಝಾನ್ ವಿರುದ್ಧ ಗುಡುಗಿದ ಸೋನು’ ಎಂಬ ಸುದ್ದಿ ಪ್ರಸಾರವಾಗಿದೆ. ಅವರು ‘ಧ್ವನಿವರ್ಧಕದ ವಿರುದ್ಧ ಮಾತನಾಡಿದ ಸೋನು’ ಎಂದು ಬರೆದಿದ್ದರೆ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ. ಧ್ವನಿವರ್ಧಕದಲ್ಲಿ ಲಾಲಿ ಹಾಡು ಕೇಳಿಸಿದರೂ ನನಗೆ ಕಿರಿಕಿರಿಯಾಗುತ್ತದೆ ಎಂದರು.

ಇತ್ತೀಚೆಗೆ ಋಷಿಕೇಶಕ್ಕೆ ಭೇಟಿ ನೀಡಿದ್ದಾಗ ಅಲ್ಲಿಯ ದೇವಸ್ಥಾನವೊಂದರಲ್ಲಿ ಮೈಕ್ ಎದುರು ಹಾಡಲು ಆಕ್ಷೇಪಿಸಲಾಗಿದೆ. ನಾಗರಿಕ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಇಷ್ಟಬಂದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಯಾರ ಮೇಲೂ ಪ್ರಭಾವ ಬೀರುವುದು ತನ್ನ ಉದ್ದೇಶವಾಗಿಲ್ಲ. ಗುರಿ ಸಾಧಿಸುವುದಕ್ಕಷ್ಟೇ ತನ್ನ ಗಮನ ಕೇಂದ್ರೀಕೃತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News