ಸಂಸತ್‌ನಲ್ಲಿ ಮತ್ತೆ ಚರ್ಚೆಗೆ ಬರಲಿದೆ ತ್ರಿವಳಿ ತಲಾಕ್ ಮಸೂದೆ
ಹೊಸದಿಲ್ಲಿ,ಡಿ.26: ಕ್ರಿಸ್ಮಸ್ ರಜೆ ಕಳೆದು ಗುರುವಾರ ಮತ್ತೆ ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸರಕಾರ ಜಾರಿಗೆ ತರಲು ಯೋಜಿಸಿರುವ ಪ್ರಮುಖ ಕಾಯ್ದೆಗಳಲ್ಲಿ ಒಂದಾಗಿರುವ ತ್ರಿವಳಿ ತಲಾಕ್ ಮಸೂದೆ ಲೋಕಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಬರಲಿದೆ.
ರಫೇಲ್ ಒಪ್ಪಂದ ಹಾಗೂ ಇತರ ಅನೇಕ ವಿಷಯಗಳನ್ನು ಮುಂದಿಟ್ಟು ವಿಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಿದ ಪರಿಣಾಮ ಅಧಿವೇಶನದ ಮೊದಲ ಎರಡು ವಾರ ಯಾವುದೇ ಚರ್ಚೆ ನಡೆಯದೆ ಸಂಪೂರ್ಣ ಪೋಲಾಗಿತ್ತು. ಚರ್ಚೆಯ ಸಮಯದಲ್ಲಿ ಹಾಜರಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಲೋಕಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಪತಿಯಂದಿರು ತಲಾಕ್ ಎಂದು ಹೇಳುವ ಮೂಲಕ ನೀಡಲಾಗುವ ವಿಚ್ಛೇದನವನ್ನು ನಿಷೇಧಿಸುವ ಉದ್ದೇಶದಿಂದ ಈ ಹಿಂದೆ ಹೊರಡಿಸಲಾಗಿದ್ದ ಸುಗ್ರಿವಾಜ್ಞೆಯನ್ನು ತೆಗೆದು ಹಾಕುವ ಮುಸ್ಲಿಂ ಮಹಿಳೆ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2018ರ ಬಗ್ಗೆ ಚರ್ಚಿಸುವಂತೆ ಸರಕಾರ ಮತ್ತು ವಿಪಕ್ಷಗಳು ಕಳೆದ ವಾರ ಪರಸ್ಪರ ಹೊಂದಾಣಿಕೆಗೆ ಆಗಮಿಸಿದ್ದವು. ತ್ರಿವಳಿ ತಲಾಕ್ ಮಸೂದೆಯನ್ನು ಕ್ರಿಸ್ಮಸ್ ರಜೆಯ ನಂತರ ಚರ್ಚೆಗೆ ತೆಗೆದುಕೊಳ್ಳಬೇಕು ಮತ್ತು ಈ ಚರ್ಚೆಯಲ್ಲಿ ತನ್ನ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದರು.
2019ರ ಎಪ್ರಿಲ್-ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಅಧಿವೇಶನ ಸದ್ಯದ ಸರಕಾರದ ಅಂತಿಮ ಚಳಿಗಾಲದ ಅಧಿವೇಶನ ಆಗಲಿರುವ ಕಾರಣ ಈ ಮಸೂದೆಯನ್ನು ಗುರುವಾರವೇ ಅಂಗೀಕರಿಸಲು ಸರಕಾರ ಬಯಸಿದೆ.