×
Ad

ರಾಷ್ಟ್ರಪತಿ ಭದ್ರತೆಗೆ 3 ಜಾತಿಗಳ ಅಭ್ಯರ್ಥಿಗಳಿಗೆ ಮಾತ್ರ ಆಹ್ವಾನ

Update: 2018-12-26 20:57 IST

ಹೊಸದಿಲ್ಲಿ,ಡಿ.26: ಕೇವಲ ಮೂರು ಜಾತಿಯ ವ್ಯಕ್ತಿಗಳನ್ನು ಮಾತ್ರ ರಾಷ್ಟ್ರಪತಿಗಳ ಅಂಗರಕ್ಷಕರಾಗಿ ನೇಮಿಸುವ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ ಈ ಬಗ್ಗೆ ಕೇಂದ್ರ ಸರಕಾರ ಮತ್ತು ಸೇನಾ ಮುಖ್ಯಸ್ಥರಲ್ಲಿ ಪ್ರತಿಕ್ರಿಯೆ ಕೇಳಿದೆ.

ನ್ಯಾಯಾಧೀಶರಾದ ಎಸ್. ಮುರಳೀಧರ ಮತ್ತು ಸಂಜೀವ್ ನರುಲ ಅವರ ಪೀಠ, ರಕ್ಷಣಾ ಸಚಿವಾಲಯ, ಸೇನಾ ಮುಖ್ಯಸ್ಥ, ರಾಷ್ಟ್ರಪತಿಗಳ ಅಂಗರಕ್ಷಕರ ಕಮಾಂಡೆಂಟ್ ಮತ್ತು ಸೇನಾ ನೇಮಕಾತಿ ನಿರ್ದೇಶಕರಿಗೆ ನೋಟೀಸ್ ಜಾರಿ ಮಾಡಿದ್ದು ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. 2017ರ ಸೆಪ್ಟಂಬರ್‌ನಲ್ಲಿ ನಡೆದ ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕಾತಿಯನ್ನು ರದ್ದುಗೊಳಿಸುವಂತೆ ಹರ್ಯಾಣ ನಿವಾಸಿ ಗೌರವ್ ಯಾದವ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.

ಈ ನೇಮಕಾತಿಯಲ್ಲಿ ಜಾಟರು, ರಜಪೂತರು ಮತ್ತು ಜಾಟ್ ಸಿಖ್ ಜಾತಿಯವರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ಆರೋಪಿಸಿರುವ ಮನವಿದಾರರು, ತಾನು ಯಾದವ/ಅಹಿರ್ ಜಾತಿಗೆ ಸೇರಿದವನಾಗಿದ್ದು ಜಾತಿಯ ಹೊರತಾಗಿ ರಾಷ್ಟ್ರಪತಿಗಳ ಅಂಗರಕ್ಷಕನಾಗಲು ಇರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ನೇಮಕಾತಿಯಲ್ಲಿ ಮೂರು ಜಾತಿಗಳಿಗೆ ಪ್ರಾಮುಖ್ಯತೆ ನೀಡಿರುವುದು ಈ ಹುದ್ದೆಗೆ ಅರ್ಹರಾಗಿರುವ ಇತರ ಸಮುದಾಯದ ನಾಗರಿಕರು ಅವಕಾಶದಿಂದ ವಂಚಿತರಾಗುವಂತೆ ಮಾಡಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ. ಜಾತಿ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಡುವ ತಾರತಮ್ಯ ಸಾರ್ವಜನಿಕ ಉದ್ಯೋಗಗಳಲ್ಲಿ ಸರಕಾರ ತಾರತಮ್ಯ ನಡೆಸಬಾರದು ಎಂಬ ಆಶಾಯದ ವಿರುದ್ಧವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News