ಅಯೋಧ್ಯೆಯಲ್ಲಿ ಶ್ರೀ ರಾಮ, ಬಿಜೆಪಿಯಿಂದ ಅಡ್ವಾಣಿಯನ್ನು ಹೊರಹಾಕಲಾಗಿದೆ ಮೋದಿ ವಿರುದ್ಧ ಶಿವಸೇನೆ ಆಕ್ರೋಶ

Update: 2018-12-26 16:06 GMT

ಹೊಸದಿಲ್ಲಿ, ಡಿ.26: ಕೆಲವು ವ್ಯಕ್ತಿಗಳಿಗೆ ಅಧಿಕಾರ ಎಂಬುದು ಆಮ್ಲಜನಕ ಇದ್ದಂತೆ. ಅದಿಲ್ಲದೆ ಅವರು ಎರಡು ವರ್ಷ ಕೂಡಾ ತಾಳಿಕೊಳ್ಳುವುದಿಲ್ಲ ಎಂಬ ಪ್ರಧಾನಿ ಮೋದಿಯ ಹೇಳಿಕೆಯನ್ನು ಟೀಕಿಸಿರುವ ಶಿವಸೇನೆ, ‘ಅಚ್ಛೇದಿನ್’ ಭರವಸೆ ಈಡೇರಿಸಲು ವಿಫಲವಾದವರು ಈಗ ವಿಪಕ್ಷದಲ್ಲಿ ಕುಳಿತುಕೊಳ್ಳಬೇಕೆಂಬ ಭಯದಲ್ಲಿದ್ದಾರೆ. ಆಮ್ಲಜನಕ ಪೂರೈಕೆ ಖಾತರಿಪಡಿಸಿಕೊಳ್ಳಲು ಕಳ್ಳರು ಶುದ್ಧೀಕರಿಸಲ್ಪಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳ ಮೇಲೆ ನಿಗಾ ಇರಿಸುವ ಸರಕಾರದ ನಿರ್ಧಾರ ನೈಜ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇದು ಅಧಿಕಾರದಲ್ಲಿ ಉಳಿಯಲು ಸರಕಾರ ನಡೆಸುತ್ತಿರುವ ಚಡಪಡಿಕೆಯಾಗಿದೆ ಎಂದು ಶಿವಸೇನೆ ಟೀಕಿಸಿದೆ. ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಸಂಪಾದಕೀಯ ಬರಹದಲ್ಲಿ , ಅಯೋಧ್ಯೆಯಲ್ಲಿ ಶ್ರೀರಾಮ ಮತ್ತು ರಾಜಕೀಯದಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿಯನ್ನು ಹೊರಹಾಕಲಾಗಿದೆ. ಉಳಿದವರು ‘ಅಧಿಕಾರ ಎಂಬ ಆಮ್ಲಜನಕದ’ ಫಲವನ್ನು ಉಣ್ಣುತ್ತಿದ್ದಾರೆ .

ಹಿರಿಯ ಮುಖಂಡರನ್ನು ಬಲವಂತವಾಗಿ ಹೊರಹಾಕುವುದು ಇಂದಿನ ದಿನದ ‘ಅಧಿಕಾರ ರಾಜಕೀಯದ’ ಲಕ್ಷಣವಾಗಿದೆ ಎಂದು ಹೇಳಲಾಗಿದೆ. ಅಧಿಕಾರವೆಂಬ ಆಮ್ಲಜನಕದ ಪೂರೈಕೆ ನಿರಂತರವಾಗಿರಲು ಗೂಂಡಾಗಳನ್ನು ಹಾಗೂ ಕಳ್ಳರನ್ನು ಶುದ್ಧೀಕರಿಸಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಕ್ರಿಮಿನಲ್‌ಗಳನ್ನು ವಾಲ್ಮೀಕಿಗಳನ್ನಾಗಿ ಮಾಡಲಾಗುತ್ತಿದೆ. ಅಧಿಕಾರದ ದಾಹವನ್ನು ಯಾರು ಕೂಡಾ ತಾಳಿಕೊಳ್ಳಲಾರರು ಎಂದು ಶಿವಸೇನೆ ತಿಳಿಸಿದೆ. ಅಧಿಕಾರದ ಆಸೆಗಾಗಿ 2014ರಲ್ಲಿ ಹಿಂದುತ್ವದ ಸಿದ್ಧಾಂತದ ಆಧಾರದಲ್ಲಿ ಶಿವಸೇನೆಯೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನೂ ಮುರಿದುಕೊಳ್ಳಲಾಗಿದೆ. ಹಿಂದುತ್ವ ಎಂಬ ಆಮ್ಲಜನಕದ ಸಿಲಿಂಡರನ್ನೂ ಕದಿಯಲಾಗಿದೆ. ಈಗ ಜನತೆ ಆಮ್ಲಜನಕ ಪೂರೈಸುವ ಸಂದರ್ಭ ಬಂದಾಗ ಬಿಜೆಪಿ ಮತ್ತೆ ಶಿವಸೇನೆಯ ಜೊತೆ ಮೈತ್ರಿಯ ಮಾತನ್ನಾಡುತ್ತಿದೆ ಎಂದು ಶಿವಸೇನೆ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News