ಬಿಗ್‌ಬಾಸ್ ಸೀಸನ್ 12 ಪ್ರಶಸ್ತಿ ಪಡೆದ ಬೆಡಗಿ ಯಾರು ಗೊತ್ತೇ?
ಹೊಸದಿಲ್ಲಿ, ಡಿ.31: ತಿಂಗಳುಗಳ ಕಾಲ ಬಿಗ್‌ಬಾಸ್ ಹೌಸ್‌ನಲ್ಲಿ ಬಂಧಿಯಾಗಿದ್ದ ದೀಪಿಕಾ ಕಾಕರ್ ಇಬ್ರಾಹೀಂ, ಬಿಗ್‌ಬಾಸ್ 12ನೇ ಸೀಸನ್‌ನ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ’ಸಸುರಲ್ ಸಿಮರ್ ಕಾ’ ಖ್ಯಾತಿಯ ಬೆಡಗಿ ಟ್ರೋಫಿ ಹಾಗೂ ನಗದು ಬಹುಮಾನ ಪಡೆದರು.
ಸೆಲೆಬ್ರಿಟಿ ಸ್ಪರ್ಧಿಯಾಗಿ ಬಿಗ್‌ಬಾಸ್ ಹೌಸ್‌ಗೆ ಪ್ರವೇಶ ಪಡೆದಿದ್ದ ದೀಪಿಕಾ, ಅಡುಗೆಮನೆ ಬಗ್ಗೆ ಅವರಿಗೆ ಇರುವ ವಿಶೇಷ ಪ್ರೀತಿ ಎಲ್ಲ ಸ್ಪರ್ಧಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರತಿಯೊಬ್ಬರ ಜತೆಗೂ ಸಾಮರಸ್ಯ ಹೊಂದಿದ್ದರು.
ಸ್ಪರ್ಧೆಯುದ್ದಕ್ಕೂ ಜತೆಗಿದ್ದ ಶ್ರೀಶಾಂತ್ ಹಾಗೂ ದೀಪಿಕಾ, ಅಪೂರ್ವ ಸ್ನೇಹಿತರಾಗಿದ್ದರು. ಇವರ ಈ ಬಂಧದ ಬಗ್ಗೆ ಸಹ ಸ್ಪರ್ಧಿಗಳಾದ ಸುರಭಿ ರಾಣಾ ಮತ್ತು ಖಾನ್ ಸಹೋದರಿಯರು ವ್ಯಾಪಕವಾಗಿ ಟೀಕಿಸಿದ್ದರು. ಇತರ ಸ್ಪರ್ಧಿಗಳ ಜತೆ ದೀಪಿಕಾ ಬೆರೆಯುತ್ತಿರಲಿಲ್ಲ ಎಂದು ಆಪಾದಿಸಿದ್ದರು.
ಬಿಗ್ ಬಾಸ್ ನೀಡಿದ ಟಾಸ್ಕ್ ಆಡುವಾಗ ಕೂಡಾ ದೀಪಿಕಾ ಪ್ರಾಮಾಣಿಕವಾಗಿದ್ದರು. ಕೆಲ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಇತರ ಕೆಲವು ಟಾಸ್ಕ್‌ಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿರಲಿಲ್ಲ. ನಿರೂಪಕ ಸಲ್ಮಾನ್ ಖಾನ್ ಅವರಿಂದ, ಪ್ರದರ್ಶನದುದ್ದಕ್ಕೂ ಅತ್ಯುತ್ತಮ ನಡತೆ ತೋರಿದ ಸ್ಪರ್ಧಿ ಎಂಬ ಸರ್ಟಿಫಿಕೇಟ್ ಪಡೆದಿದ್ದರು. ಯಾವುದೇ ಒಳಸಂಚು ಅಥವಾ ಜಗಳದಿಂದ ದೂರ ಉಳಿದಿದ್ದ ದೀಪಿಕಾ, ಎಲ್ಲೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಶ್ರೀಶಾಂತ್ ಸಿಟ್ಟಾದಾಗಲೆಲ್ಲ ಸಮಾಧಾನಪಡಿಸುತ್ತಿದ್ದರು.