×
Ad

ಕೊನೆಗೂ ಹೊಸ ಸಿಐಸಿ ನೇಮಕ ಮಾಡಿದ ಸರ್ಕಾರ

Update: 2018-12-31 09:38 IST

ಹೊಸದಿಲ್ಲಿ, ಡಿ.31: ಕೇಂದ್ರ ಮಾಹಿತಿ ಆಯೋಗದಲ್ಲಿ ಖಾಲಿ ಇದ್ದ ಮಾಹಿತಿ ಆಯುಕ್ತರು ಹಾಗೂ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗಳಿಗೆ ಕೇಂದ್ರ ಸರ್ಕಾರ ಕೊನೆಗೂ ನೇಮಕ ಮಾಡಿದ್ದು, ಸುಧೀರ್ ಭಾರ್ಗವ ಅವರನ್ನು ಹೊಸ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಿಸಿದೆ.

11 ಆಯುಕ್ತರ ಹುದ್ದೆಗಳ ಪೈಕಿ ಎಂಟು ಹುದ್ದೆಗಳು ಖಾಲಿ ಇದ್ದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈಗಾಗಲೇ ಮಾಹಿತಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸುಧೀರ್ ಭಾರ್ಗವ ಅವರನ್ನೇ ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.

ಮಾಜಿ ಐಎಫ್‌ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾ, ಮಾಜಿ ಐಆರ್‌ಎಸ್ ಅಧಿಕಾರಿ ವನಜಾ ಎನ್. ಸರ್ನಾ, ಮಾಜಿ ಐಎಎಸ್ ಅಧಿಕಾರಿ ನೀರಜ್ ಕುಮಾರ್ ಗುಪ್ತಾ ಹಾಗೂ ಮಾಜಿ ಕಾನೂನು ಕಾರ್ಯದರ್ಶಿ ಸುರೇಶ್ಚಂದ್ರ ಅವರ ನೇಮಕಾತಿಗೆ ಕೂಡಾ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.

ಕೇಂದ್ರ ಮಾಹಿತಿ ಆಯೋಗದ ಏಕೈಕ ಮಹಿಳಾ ಆಯುಕ್ತೆ ಎನಿಸಿಕೊಂಡ ಸರ್ನಾ 1980ನೇ ಬ್ಯಾಚ್ ಐಆರ್‌ಎಸ್ ಅಧಿಕಾರಿಯಾಗಿದ್ದು, ಕೇಂದ್ರ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿನ್ಹಾ ಅವರು 1981ನೇ ಬ್ಯಾಚ್ ಐಎಫ್‌ಎಸ್ ಅಧಿಕಾರಿಯಾಗಿದ್ದು, ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಸರ್ಕಾರ ನೇಮಕ ಮಾಡಿದ ಎಲ್ಲ ನಾಲ್ವರು ಮಾಜಿ ಅಧಿಕಾರಿಗಳು ಕೂಡಾ ಈ ವರ್ಷ ಸೇವೆಯಿಂದ ನಿವೃತ್ತರಾಗಿದ್ದರು.

11 ಆಯುಕ್ತರ ಹುದ್ದೆಗಳ ಪೈಕಿ ಕೇವಲ 3 ಮಂದಿ ಮಾತ್ರ ಉಳಿದುಕೊಂಡಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಿಐಸಿ ಮತ್ತು ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಪಾರದರ್ಶಕತೆ ಅನುಸರಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ನೇಮಕಗೊಂಡ ಅಧಿಕಾರಿಗಳ ವಿವರಗಳನ್ನು ಮತ್ತು ಅರ್ಜಿದಾರರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News