×
Ad

ಸ್ಪಷ್ಟೀಕರಣ ವೀಡಿಯೊ ಮೂಲಕ ಮತ್ತೆ ಬಿಜೆಪಿಗೆ ಮುಜುಗರ ತಂದ ಪಕ್ಷದ ಬೆಂಬಲಿಗ

Update: 2018-12-31 11:23 IST

ಹೊಸದಿಲ್ಲಿ, ಡಿ.31: ಪ್ರಧಾನಿ ನರೇಂದ್ರ ಮೋದಿ  ಡಿಸೆಂಬರ್ 19ರಂದು  ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಂವಹನ ಕಾರ್ಯಕ್ರಮದಲ್ಲಿ ಪುದುಚ್ಚೇರಿಯ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಸರಕಾರದ ಮಧ್ಯಮ ವರ್ಗ ವಿರೋಧಿ ನೀತಿಗಳಿಗೆ ಆಕ್ಷೇಪಿಸಿ ಕೇಳಿದ ಪ್ರಶ್ನೆ ಪ್ರಧಾನಿಯನ್ನು ಮುಜುಗರಕ್ಕೀಡು ಮಾಡಿ ಪ್ರಧಾನಿ ‘ಪುದುಚ್ಚೇರಿ ಕೋ ವಣಕ್ಕಂ’ ಎಂದು ಹೇಳಿ ತಕ್ಷಣ ತಮ್ಮ ಮುಂದಿನ ಸಂವಹನಕ್ಕೆ ತಿರುಗಿದ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ‘ಪುದುಚ್ಚೇರಿ ಕೋ ವಣಕ್ಕಂ’ ಹಾಸ್ಯವೇ ಹರಿದು ಬಂದಿತ್ತು.

ಇದೀಗ ಈ ಘಟನೆಗೆ ಸ್ಪಷ್ಟೀಕರಣ ನೀಡಲೆಂಬಂತೆ ನಿರ್ಮಲ್ ಕುಮಾರ್ ಜೈನ್ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ತನಗೆ ಪ್ರಧಾನಿಗೆ ಪ್ರಶ್ನೆ ಕೇಳಲು ಅನುಮತಿಸಿದ್ದಕ್ಕೆ ತಾನು ಅಭಾರಿಯಾಗಿದ್ದೇನೆಂದು ಅದರಲ್ಲಿ ಹೇಳಿದ್ದಾರೆ. ಈ ಕಿರು ವೀಡಿಯೋದಲ್ಲಿ ಅವರು ತಾವು ಪ್ರಧಾನಿಗೆ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಅವರು ನೀಡಿದ ಉತ್ತರವನ್ನು ಮಾಧ್ಯಮ ತಿರುಚಿದೆ ಎಂದು ಆರೋಪಿಸಿದ್ದಾರೆ.

‘‘ನಾನು ಮೋದಿಗೆ ಕೇಳಿದ ಪ್ರಶ್ನೆಯ ಬಗ್ಗೆ ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ನನ್ನ ಪ್ರಶ್ನೆಗೆ ಪ್ರಧಾನಿ ಹೇಗೆ ಪ್ರತಿಕ್ರಿಯಿಸಿದರೆಂಬುದಕ್ಕೆ ಅವರು ಗಮನ ನೀಡಿಲ್ಲ. ನಮ್ಮ ಪ್ರಧಾನಿಗೆ ಅಪಖ್ಯಾತಿ ತರಲು ತಪ್ಪಾಗಿ ವರದಿ ಮಾಡಲಾಗಿದೆ. ಈ ಅಪ ಪ್ರಚಾರದಿಂದ ನನಗೆ ನೊವಾಗಿದೆ. ಇಂತಹ ಅಪ ಪ್ರಚಾರದಿಂದ ಬಿಜೆಪಿ ಹಾಗೂ ಮೋದೀಜಿ ಜತೆಗಿನ ನನ್ನ ಸಂಬಂಧ ಕೊನೆಗೊಳ್ಳುವುದಿಲ್ಲ’’ ಎಂದು ಹೇಳಿದ್ದಾರೆ.

ಬಹಳಷ್ಟು ಎಡಿಟ್ ಮಾಡಲ್ಪಟ್ಟ ಈ ವೀಡಿಯೋವನ್ನು ಜೈನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಜಾಲತಾಣಿಗರು ಮತ್ತೆ ಬಿಜೆಪಿ ಮತ್ತು ಮೋದಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇದು ಜೈನ್ ಅವರನ್ನು ಮತ್ತೊಂದು ಸ್ಪಷ್ಟೀಕರಣ ನೀಡುವಂತೆ ಮಾಡಿದೆ. ಈ ಬಾರಿ ಅವರು ಬರೆದುಕೊಡಲಾಗಿದ್ದನ್ನು ಓದಿದ್ದರಿಂದ ಅದರಿಂದ ಅವರು ಮತ್ತಷ್ಟು ಅಪಹಾಸ್ಯ ಮಾಡಿದ್ದು, ಹಲವರು ಬಿಜೆಪಿ ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದೆ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News