ನಿಶಿಕೋರಿ, ಒಸಾಕಾ ಸೆಮಿಫೈನಲ್‌ಗೆ
ಬ್ರಿಸ್ಬೇನ್(ಆಸ್ಟ್ರೇಲಿಯ), ಜ.3: ಬಲ್ಗೇರಿಯದ ಗ್ರಿಗೊರ್‌ಡಿಮಿಟ್ರೊವ್ ಅವರನ್ನು 7-5, 7-5 ಸೆಟ್‌ಗಳ ಅಂತರದಿಂದ ಮಣಿಸಿದ ಜಪಾನ್‌ನ ಸ್ಟಾರ್ ಆಟಗಾರ ಕಿ ನಿಶಿಕೋರಿ, ತಾನು ಮತ್ತೆ ಹಳೆಯ ಲಯಕ್ಕೆ ಮರಳಿರುವುದಾಗಿ ಸಾಬೀತು ಪಡಿಸಿದ್ದಾರೆ. ಇಲ್ಲಿ ಗುರುವಾರ ನಡೆದ ಬ್ರಿಸ್ಬೇನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲ್ಲುವ ಮೂಲಕ ಅವರು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಉಭಯ ಸೆಟ್‌ಗಳಲ್ಲಿ ತಲಾ 5 ಅಂಕ ಗಳಿಸಿದ ಡಿಮಿಟ್ರೊವ್ ಅವರು ನಿಶಿಕೋರಿ ಅವರಿಗೆ ಭಾರೀ ಸವಾಲು ಒಡ್ಡಿದರು. ನಿಶಿಕೋರಿ ರವಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸ್ಥಾನ ಪಡೆಯಲು ಫ್ರಾನ್ಸ್ ನ ಜೆರೆಮಿ ಚಾರ್ಡಿ ಅವರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಚಾರ್ಡಿ ಅವರು ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನ್‌ನ ಯಾಸುಟಕಾ ಯುಚಿಯಾಮ ಅವರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಜೊ ವಿಲ್ಫ್ರೆಡ್ ಸೋಂಗ ಅವರು ಜಪಾನ್‌ನ ಟಾರೊ ಡೇನಿಯಲ್ ಅವರನ್ನು 7-6(7-5), 6-3 ಸೆಟ್‌ಗಳಿಂದ ಮಣಿಸಿದರು. ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ಆಸ್ಟ್ರೇಲಿಯದ ಉದಯೋನ್ಮುಖ ಆಟಗಾರ ಅಲೆಕ್ಸ್ ಡಿ ಮಿನಾವರ್ ಅವರನ್ನು ಎದುರಿಸಲಿದ್ದಾರೆ.
► ಒಸಾಕಾ ಸೆಮಿ: ಮಹಿಳೆಯರ ಸಿಂಗಲ್ಸ್ ನಲ್ಲಿ ಯುಎಸ್ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕಾ ಅವರು ಲಾಟ್ವಿಯಾದ ಅನಸ್ತೇಸಿಯಾ ಸೆವಾತ್ಸೊವಾ ಅವರನ್ನು 3-6, 6-0, 6-0 ಸೆಟ್‌ಗಳಿಂದ ಮಣಿಸಿ ಪಾರಮ್ಯ ಮೆರೆದರು. ಮೊದಲ ಸೆಟ್‌ನ್ನು ಸೋತರೂ ಅಂಜದ ಒಸಾಕಾ ಸತತ ಎರಡು ಸೆಟ್‌ಗಳನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಒಸಾಕಾ ಸೆಮಿಫೈನಲ್ ಸುತ್ತಿನಲ್ಲಿ ಲೆಸಿಯಾ ಸುರೆಂಕೊ ಅಥವಾ ಆನೆಟ್ ಕೊಂಟಾವೆಟ್ ಅವರ ಸವಾಲನ್ನು ಎದುರಿಸಲಿದ್ದಾರೆ.