28 ವೃತ್ತಿಪರ ಟೆನಿಸ್ ಆಟಗಾರರನ್ನು ಬಂಧಿಸಿದ ಸ್ಪೇನ್ ಪೊಲೀಸ್
ಅಪಾರ ನಗದು ವಶ
ಮ್ಯಾಡ್ರಿಡ್, ಜ.10: ವೃತ್ತಿಪರ ಟೆನಿಸ್ ಪಂದ್ಯಗಳಲ್ಲಿ ಮೋಸದಾಟ ವಾಡಿ ಮಿಲಿಯನ್ ಯುರೋ ಸಂಪಾದಿಸಿದ ಶಂಕೆಯ ಮೇರೆಗೆ ಸ್ಪೇನ್ ಪೊಲೀಸರು 28 ವೃತ್ತಿಪರ ಟೆನಿಸ್ ಆಟಗಾರರ ಸಹಿತ ಒಟ್ಟು 83 ಮಂದಿಯನ್ನು ಬಂಧಿಸಿದ್ದಾರೆ.
‘‘ಸ್ಪೇನ್‌ನ ಸಿವಿಲ್ ಗಾರ್ಡ್, ದೇಶದ ನ್ಯಾಶನಲ್ ಹೈಕೋರ್ಟ್ ಸಹಯೋಗದೊಂದಿಗೆ ಅರ್ಮೆನಿಯದ ಸಂಘಟಿತ ಅಪರಾಧಿಗಳ ಜಾಲವನ್ನು ಭೇದಿಸಿದ್ದು, ಒಟ್ಟು 83 ಮಂದಿ ಶಂಕಿತರನ್ನು ಬಂಧಿಸಲಾಗಿದ್ದು, ಈ ಪೈಕಿ 28 ಮಂದಿ ವೃತ್ತಿಪರ ಆಟಗಾರರಾಗಿದ್ದಾರೆ ಎಂದು ಯುರೋಪೊಲ್ ವರದಿ ಮಾಡಿದೆ. ‘‘11 ಮನೆಗಳ ಮೇಲೆ ದಾಳಿ ನಡೆಸಿ, 167,000 ಯುರೋ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಶಾಟ್‌ಗನ್ ಹಾಗೂ ಐದು ಐಶಾರಾಮಿ ವಾಹನಗಳು, 42 ನಕಲಿ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಮೆನಿಯದ ಕ್ರಿಮಿನಲ್ ಗುಂಪು ಬೆಟ್ಟಿಂಗ್ ಉದ್ದೇಶದಿಂದ ವೃತ್ತಿಪರ ಆಟಗಾರರಿಗೆ ಲಂಚ ನೀಡುತ್ತಿತ್ತು. ಪಂದ್ಯದ ಫಲಿತಾಂಶವನ್ನು ಮೊದಲೇ ನಿರ್ಧರಿಸುತ್ತಿತ್ತು. ವೃತ್ತಿಪರ ಆಟಗಾರರನ್ನು ಗ್ಯಾಂಗ್ ಹಾಗೂ ಉಳಿದ ಗುಂಪಿನ ಕೊಂಡಿಯಾಗಿ ಬಳಸುತ್ತಿತ್ತು. ಗ್ಯಾಂಗ್‌ನ ಸದಸ್ಯರು ಪಂದ್ಯದಲ್ಲಿ ಹಾಜರಾಗುತ್ತಿದ್ದರು. ಆಟಗಾರರು ತಾವು ಮೊದಲೇ ಒಪ್ಪಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳುತ್ತಿದ್ದರು. ಓರ್ವ ವೃತ್ತಿಪರ ಆಟಗಾರ ಕಳೆದ ವರ್ಷ ನಡೆದ ಯುಎಸ್ ಓಪನ್‌ನಲ್ಲಿ ಭಾಗವಹಿಸಿದ್ದು, ಅಧಿಕಾರಿಗಳು ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಕೆಳ ದರ್ಜೆಯ ಫ್ಯೂಚರ್ಸ್ ಹಾಗೂ ಚಾಲೆಂಜರ್ ಟೂರ್ನಿಗಳಲ್ಲಿ ಕನಿಷ್ಠ 97 ಪಂದ್ಯಗಳು ಫಿಕ್ಸ್ ಆಗಿವೆ ಎಂದು ಯುರೋಪೊಲ್ ತಿಳಿಸಿದೆ.
ಒಂದೇ ದಿನ ನಡೆದ ದಾಳಿಯ ವೇಳೆ ಸ್ಪೇನ್ ಪೊಲೀಸರು 50 ಇಲೆಕ್ಟ್ರಾನಿಕ್ ವಸ್ತುಗಳನ್ನು, ಕ್ರೆಡಿಟ್ ಕಾರ್ಡ್‌ಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ.