ವಿದಾಯದ ಸುಳಿವು ನೀಡಿದ ಆ್ಯಂಡಿ ಮರ್ರೆ

Update: 2019-01-11 18:06 GMT

ಮೆಲ್ಬೋರ್ನ್, ಜ.11: ಬ್ರಿಟನ್ ಟೆನಿಸ್ ಸ್ಟಾರ್ ಆ್ಯಂಡಿ ಮರ್ರೆ ಮುಂದಿನ ವಾರ ಆರಂಭವಾಗುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಬಳಿಕ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ನೊವಾಕ್ ಜೊಕೊವಿಕ್ ವಿರುದ್ಧ ಗುರುವಾರ ಅಭ್ಯಾಸ ಪಂದ್ಯವನ್ನಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಮರ್ರೆ, ಸ್ವದೇಶದಲ್ಲಿ ನಡೆಯುವ ವಿಂಬಲ್ಡನ್ ಚಾಂಪಿಯನ್‌ಶಿಪ್ ಬಳಿಕ ನಿವೃತ್ತಿಯಾಗಬೇಕೆಂದು ಬಯಸಿದ್ದೆ. ಆದರೆ, ಮುಂದಿನ ನಾಲ್ಕರಿಂದ ಐದು ತಿಂಗಳ ಕಾಲ ನೋವಿನೊಂದಿಗೆ ಆಡಲು ನನ್ನಿಂದ ಸಾಧ್ಯವಿಲ್ಲ. ಆಸ್ಟ್ರೇಲಿಯನ್ ಓಪನ್ ನನ್ನ ವಿದಾಯದ ಪಂದ್ಯವಾಗಬಹುದು’ ಎಂದು ಉದ್ವೇಗ ತಡೆಯಲಾಗದೆ ಕಣ್ಣೀರಿಡುತ್ತಾ ಮರ್ರೆ ಹೇಳಿದ್ದಾರೆ. 31ರ ಹರೆಯದ ಮರ್ರೆ ಬಳಿ ನಿಮ್ಮ ಗಾಯದ ಸಮಸ್ಯೆ ಹೇಗಿದೆ ಎಂದು ಕೇಳಿದಾಗ, ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಿ, ದುಃಖ ತಡೆಯಲಾಗದೆ ಕೊಠಡಿಯಿಂದ ಹೊರ ನಡೆದರು. ಕೆಲವು ನಿಮಿಷದ ಬಳಿಕ ವಾಪಸಾದ ಮರ್ರೆ, ‘‘ನಾನು ಕಳೆದ ಕೆಲವು ಸಮಯದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದೇನೆ. 20 ತಿಂಗಳಿಂದ ತುಂಬಾ ನೋವು ನನ್ನನ್ನು ಕಾಡುತ್ತಿದೆ’’ ಎಂದರು. ಮರ್ರೆ 77 ವರ್ಷಗಳ ಬಳಿಕ ಬ್ರಿಟಿನ್‌ಗೆ ವಿಂಬಲ್ಡನ್ ಟ್ರೋಫಿ ಗೆದ್ದುಕೊಟ್ಟಿದ್ದರು. ಟೆನಿಸ್ ಅಂಗಳದಲ್ಲಿ ದೇಶದ ನಿರೀಕ್ಷೆಯ ಹೊತ್ತು ಆಡುತ್ತಿದ್ದರು. ಮೂರು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್, 2 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ 31ರ ರ ಹರೆಯದ ಮರ್ರೆ ಗಾಯದ ಸಮಸ್ಯೆ ಯಿಂದಾಗಿಯೇ ಒತ್ತಾಯಪೂರ್ವಕವಾಗಿ ಟೆನಿಸ್‌ನಿಂದ ನಿವೃತ್ತಿಯಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮರ್ರೆ ನಿವೃತ್ತಿ ಸುಳಿವು ನೀಡಿದ ತಕ್ಷಣ ಮಾಜಿ ಹಾಗೂ ಹಾಲಿ ಟೆನಿಸ್ ಆಟಗಾರರು ಮರ್ರೆಗೆ ಶುಭಾಶಯ ಹೇಳುವ ಜೊತೆಗೆ ಬೇಸರವನ್ನು ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News