ಇಂದು ಮೂರನೇ ಏಕದಿನ: ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ

Update: 2019-01-17 18:07 GMT

ಮೆಲ್ಬೋರ್ನ್, ಜ.17: ಮೊತ್ತ ಮೊದಲ ಬಾರಿ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿದ್ದ ಭಾರತ ಇದೀಗ ಏಕದಿನ ಸರಣಿಯಲ್ಲೂ ಅಂತಹದ್ದೇ ಐತಿಹಾಸಿಕ ಸಾಧನೆಯ ವಿಶ್ವಾಸದೊಂದಿಗೆ ಶುಕ್ರವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ.

ಭಾರತ ತಂಡ ಆಸ್ಟ್ರೇಲಿಯ ಮಣ್ಣಿನಲ್ಲಿ ಈತನಕ ದ್ವಿಪಕ್ಷೀಯ ಏಕದಿನ ಸರಣಿಯನ್ನು ಜಯಿಸಿಲ್ಲ. ಈಗಾಗಲೇ ಸರಣಿಯನ್ನು 1-1 ರಿಂದ ಸಮಬಲಗೊಳಿಸಿರುವ ಕೊಹ್ಲಿ ಬಳಗಕ್ಕೆ ಐತಿಹಾಸಿಕ ಏಕದಿನ ಸರಣಿ ಜಯಿಸುವ ಅಪೂರ್ವ ಅವಕಾಶ ಲಭಿಸಿದೆ.

ಸಿಡ್ನಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯ 34 ರನ್‌ಗಳಿಂದ ಗೆದ್ದುಕೊಂಡಿದ್ದರೆ, ಅಡಿಲೇಡ್‌ನಲ್ಲಿ ನಡೆದ 2ನೇ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಭಾರತ ಕಾಂಗರೂನಾಡಿನಲ್ಲಿ ದ್ವಿಪಕ್ಷೀಯ ಸರಣಿ ಜಯಿಸಿಲ್ಲ. ಆದರೆ, ಆಸೀಸ್‌ನಲ್ಲಿ ನಡೆದಿದ್ದ ಎರಡು ಸರಣಿಗಳಾದ 1985ರ ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್ ಹಾಗೂ 2008ರಲ್ಲಿ ನಡೆದ ಯುಬಿ ಸಿರೀಸ್‌ನಲ್ಲಿ ಜಯ ಸಾಧಿಸಿತ್ತು. ಭಾರತ ಇದೀಗ ಎರಡನೇ ಬಾರಿ ದ್ವಿಪಕ್ಷೀಯ ಏಕದಿನ ಸರಣಿಯನ್ನಾಡುತ್ತಿದೆ. 2016ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಮೊದಲ ದ್ವಿಪಕ್ಷೀಯ ಸರಣಿಯನ್ನು 1-4 ಅಂತರದಿಂದ ಕಳೆದುಕೊಂಡಿತ್ತು.

ಸರಣಿಯಲ್ಲಿ ಈವರೆಗೆ ಹಿರಿಯ ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಮುಹಮ್ಮದ್ ಶಮಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ಕೂಡ ಮಧ್ಯಮ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕುತ್ತಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತ ಪೂರ್ಣಕಾಲಿಕ ವೇಗಿಯನ್ನು ಸಿಡ್ನಿ ಕ್ರಿಕೆಟ್ ಮೈದಾನ ಹಾಗೂ ಅಡಿಲೇಡ್ ಓವಲ್‌ನಲ್ಲಿ ತನ್ನ ಐದನೇ ಬೌಲಿಂಗ್ ಆಯ್ಕೆಯಾಗಿ ಬಳಸಿಕೊಂಡಿತ್ತು. 5ನೇ ಬೌಲರ್ ಆಗಿ ಆಡಿದ್ದ ಖಲೀಲ್ ಅಹ್ಮದ್(0-55) ಹಾಗೂ ಮುಹಮ್ಮದ್ ಸಿರಾಜ್(0-76)ತಾವಾಡಿದ್ದ ತಲಾ ಒಂದು ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ. ಆಲ್‌ರೌಂಡರ್ ವಿಜಯ್ ಶಂಕರ್ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಗುರುವಾರ ಎಂಸಿಜಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದು ಆಡುವ ಬಳಗ ಸೇರುವ ಸ್ಪರ್ಧೆಯಲ್ಲಿದ್ದಾರೆ.

ಶಂಕರ್ ಮೂರನೇ ವೇಗದ ಬೌಲಿಂಗ್ ಆಯ್ಕೆಯಾಗಿಯೂ, ಹೆಚ್ಚುವರಿ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಬಲ ನೀಡಬಲ್ಲರು. ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲಿ ಶಂಕರ್ 10 ಓವರ್ ಬೌಲಿಂಗ್ ಮಾಡಬಲ್ಲರೇ ಎಂಬ ಬಗ್ಗೆ ಭಾರತಕ್ಕೆ ಖಚಿತತೆ ಇಲ್ಲ. ಎಂಸಿಜಿಯಂತಹ ದೊಡ್ಡ ಮೈದಾನದಲ್ಲಿ ಚಹಾಲ್‌ಗೆ ರನ್ ನಿಯಂತ್ರಿಸುವ ಸಾಮರ್ಥ್ಯವಿದೆ. ಅವರು ಆಕ್ರಮಣಕಾರಿ ಸ್ಪೆಲ್ ಎಸೆಯಬಲ್ಲರು. ಹೀಗಾಗಿ ಚಹಾಲ್ ಆಡುವ ಬಳಗ ಸೇರುವ ನೆಚ್ಚಿನ ಆಟಗಾರನಾಗಿದ್ದಾರೆ.

ಒಂದು ವೇಳೆ ಕೊಹ್ಲಿ ಅವರು ಶಂಕರ್‌ಗೆ ಚೊಚ್ಚಲ ಪಂದ್ಯವನ್ನಾಡಲು ಅವಕಾಶ ನೀಡಿದರೆ, ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಐದನೇ ಬೌಲರ್ ಎಸೆಯಬೇಕಾದ 10 ಓವರ್‌ಗಳನ್ನು ಕೇದಾರ್ ಜಾಧವ್ ಹಾಗೂ ಶಂಕರ್ ಹಂಚಿಕೊಳ್ಳಬೇಕಾಗುತ್ತದೆ. ಈ ಹೆಜ್ಜೆ ಇಟ್ಟರೆ ಅಂಬಟಿ ರಾಯುಡು ಅಥವಾ ದಿನೇಶ್ ಕಾರ್ತಿಕ್ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ಕಾರ್ತಿಕ್ 2ನೇ ಏಕದಿನದಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದರು. ರಾಯುಡು ಭಾರತದ ನೆಚ್ಚಿನ 4ನೇ ಕ್ರಮಾಂಕದ ದಾಂಡಿಗನಾಗಿದ್ದಾರೆ. ರಾಯುಡು ಹೊರಗಿಡುವ ನಿರ್ಧಾರ ನಾಯಕ ಕೊಹ್ಲಿಗೆ ಕಠಿಣವಾಗಿ ಪರಿಣಮಿಸಿದೆ.

ಸರಣಿಯಲ್ಲಿ ಸತತ ಎರಡು ಅರ್ಧಶತಕಗಳನ್ನು ಸಿಡಿಸಿರುವ ಮಾಜಿ ನಾಯಕ ಎಂಎಸ್ ಧೋನಿ ಕಳಪೆ ಫಾರ್ಮ್‌ನಿಂದ ಹೊರ ಬಂದಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯ ತಂಡದ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್ ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿದ್ದು, ನಥಾನ್ ಲಿಯೊನ್ ಮೊದಲೆರಡು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ ಬಿಲ್ಲಿ ಸ್ಟಾನ್‌ಲೇಕ್ ಹಾಗೂ ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪ ಆಡುವ 11ರ ಬಳಗ ಸೇರಬಹುದು. ಕೇನ್ ರಿಚರ್ಡ್‌ಸನ್ ವೇಗದ ಬೌಲಿಂಗ್ ವಿಭಾಗಕ್ಕೆ ಸೇರಲಿದ್ದಾರೆ. ಆಸೀಸ್ ಬ್ಯಾಟಿಂಗ್ ವಿಭಾಗದಲ್ಲಿ ಶಾನ್ ಮಾರ್ಷ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರು 8 ಏಕದಿನಗಳಲ್ಲಿ 4 ಶತಕ ಸಿಡಿಸಿದ್ದಾರೆ.

ಆರಂಭಿಕ ಆಟಗಾರರು ರನ್ ಬರ ಎದುರಿಸುತ್ತಿರುವುದು ಆತಿಥೇಯರಿಗೆ ತಲೆನೋವಾಗಿ ಕಾಡುತ್ತಿದೆ. ಆರಂಭಿಕರಾದ ಫಿಂಚ್ ಹಾಗೂ ಅಲೆಕ್ಸ್ ಕಾರೆ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ದಾಂಡಿಗರೇ ತಂಡವನ್ನು ಆಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News