ಹಾರ್ದಿಕ್ ಪಾಂಡ್ಯ, ರಾಹುಲ್ ಅಮಾನತು ರದ್ದತಿಗೆ ಸಿಒಎಗೆ ಬಿಸಿಸಿಐ ಅಧ್ಯಕ್ಷ

Update: 2019-01-19 18:07 GMT

ಮನವಿ ಹೊಸದಿಲ್ಲಿ, ಜ.19: ಟಿವಿ ಕಾರ್ಯಕ್ರಮ ವೊಂದರಲ್ಲಿ ಮಹಿಳೆಯರ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್‌ಗೆ ವಿಧಿಸಿರುವ ಅಮಾನತು ಕ್ರಮವನ್ನು ಹಿಂಪಡೆಯಬೇಕು ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಶನಿವಾರ ಆಡಳಿತಾಧಿಕಾರಿ ಸಮಿತಿಗೆ(ಸಿಒಎ)ವಿನಂತಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ವಿಶೇಷ ಸಾಮಾನ್ಯ ಸಭೆ ಕರೆಯಲು ಅವರು ನಿರಾಕರಿಸಿದ್ದಾರೆ.

ಮುಂದಿನ ವಾರ ಸುಪ್ರೀಂಕೋರ್ಟ್ ಇಬ್ಬರು ಆಟಗಾರರ ಕುರಿತ ಅರ್ಜಿ ಆಲಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆದು ಇಬ್ಬರು ಆಟಗಾರರ ನಡತೆ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿ ನೇಮಿಸಬೇಕೆಂಬ ಮಂಡಳಿ ಅಧಿಕಾರಿಗಳ ಬೇಡಿಕೆ ಸರಿಯಿಲ್ಲ ಎಂದು ಖನ್ನಾ ಹೇಳಿದ್ದಾರೆ.

ಟಿವಿ ಚಾಟ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವ ಪಾಂಡ್ಯ ಹಾಗೂ ರಾಹುಲ್‌ರನ್ನು ಅಮಾನತುಗೊಳಿಸಿದ್ದ ಸಿಇಒ ತನಿಖೆ ಕಾಯ್ದಿರಿಸಿದೆ. ಆಟಗಾರರಿಬ್ಬರು ತಪ್ಪು ಮಾಡಿದ್ದಾರೆ. ಈಗಾಗಲೇ ಅವರನ್ನು ಅಮಾನತು ಮಾಡಿ ಆಸ್ಟ್ರೇಲಿಯ ವಿರುದ್ಧ ಸರಣಿಯಿಂದ ಹಿಂದಕ್ಕೆ ಕರೆಸಲಾಗಿದೆ. ಅವರಿಬ್ಬರು ಬೇಷರತ್ ಕ್ಷಮೆ ಕೋರಿದ್ದಾರೆ ಎಂದು ಬಿಸಿಸಿಐ ಆಡಳಿತವನ್ನು ನೋಡಿಕೊಳ್ಳುತ್ತಿರುವ ಸಿಒಎಗೆ ಬರೆದ ಪತ್ರದಲ್ಲಿ ಖನ್ನಾ ತಿಳಿಸಿದ್ದಾರೆ.

ಈಗಾಗಲೇ ಆಸೀಸ್ ವಿರುದ್ಧ ಏಕದಿನ ಸರಣಿ ಹಾಗೂ ಮುಂಬರುವ ನ್ಯೂಝಿಲೆಂಡ್ ಪ್ರವಾಸದಿಂದ ಹೊರಗುಳಿದಿರುವ ಇಬ್ಬರು ಆಟಗಾರರ ವೃತ್ತಿಭವಿಷ್ಯ ನಿರ್ಧರಿಸಲು ಸುಪ್ರೀಂಕೋರ್ಟ್ ತನಿಖಾಕಾರಿಯೊಬ್ಬರನ್ನು ನೇಮಿಸ ಬೇಕೆಂದು ಸಿಒಎ ಬಯಕೆಯಾಗಿದೆ. ಸುಮಾರು 14 ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಮುಖ್ಯವಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಬಣ ಶೀಘ್ರವೇ ಎಸ್‌ಜಿಎಂ ಕರೆಯಬೇಕೆಂದು ಬೇಡಿಕೆ ಇಟ್ಟಿದೆ. ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ, ಖನ್ನಾಗೆ ಪತ್ರ ಬರೆದು 10 ದಿನಗೊಳಗೆ ವಿಶೇಷ ಸಭೆ ಕರೆದು ತನಿಖಾಕಾರಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News