ಇವಿಎಂ ಹ್ಯಾಕಿಂಗ್ ಆರೋಪ ಮಾಡಿದ ಸುದ್ದಿಗೋಷ್ಠಿಯಲ್ಲಿ ಕಪಿಲ್ ಸಿಬಲ್ ಇದ್ದದ್ದೇಕೆ?

Update: 2019-01-22 14:38 GMT

  ಹೊಸದಿಲ್ಲಿ,ಜ.22: 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲಾಗಿತ್ತು ಮತ್ತು ಹಿರಿಯ ಬಿಜೆಪಿ ನಾಯಕ ಗೋಪಿನಾಥ ಮುಂಢೆ ಅವರು ಈ ವಿಷಯವನ್ನು ಬಹಿರಂಗಗೊಳಿಸುವ ಮೊದಲೇ ಅವರ ಕೊಲೆಯನ್ನು ಮಾಡಲಾಗಿತ್ತು ಎನ್ನುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿರುವ ಲಂಡನ್ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ಪ್ರಾಯೋಜಿಸಿತ್ತು ಮತ್ತು ಈ ಆರೋಪಗಳನ್ನು ಅದೇ ಹೆಣೆದಿತ್ತು ಎಂದು ಬಿಜೆಪಿಯು ಮಂಗಳವಾರ ಆರೋಪಿಸಿದೆ.

  ಅಮೆರಿಕದಲ್ಲಿ ನೆಲೆಸಿರುವ ಸೈಬರ್ ತಜ್ಞ ಸೈಯದ್ ಶುಜಾ ಅವರು ಇವಿಎಂಗಳಿಗೆ ಕನ್ನ ಹಾಕಲು ಸಾಧ್ಯವಿದೆ ಎನ್ನುವುದನ್ನು ತೋರಿಸಲು ಸೋಮವಾರ ಈ ಸುದ್ದಿಗೋಷ್ಠಿಯನ್ನು ಕರೆದಿದ್ದರು,ಆದರೆ ಯಾವುದೇ ಆಧಾರಗಳನ್ನು ಒದಗಿಸದೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ತನ್ನ ನಾಯಕ ಕಪಿಲ್ ಸಿಬಲ್ ಅವರ ಉಪಸ್ಥಿತಿಯು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದು, ಅದು ಈ ಸುದ್ದಿಗೋಷ್ಠಿಯಿಂದ ಅಂತರವನ್ನು ಕಾಯ್ದುಕೊಂಡಿದೆ. ಈ ಸುದ್ದಿಗೋಷ್ಠಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭೀಷೇಕ ಮನು ಸಿಂಘ್ವಿ ಅವರು ಸೋಮವಾರ ಸಂಜೆ ಹೇಳಿಕೆ ನೀಡಿದ್ದರು. ಆದರೆ ಕಾಂಗ್ರೆಸ್‌ನ ಸಮಜಾಯಿಷಿ ಬಿಜೆಪಿಗೆ ತೃಪ್ತಿ ನೀಡಿಲ್ಲ.

ಲಂಡನ್ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್ ಪ್ರಾಯೋಜಿಸಿತ್ತು. 2014ರ ಜನಾದೇಶವನ್ನು ಅವಮಾನಿಸಲು ಈ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವನ್ನು ರೂಪಿಸಲಾಗಿತ್ತೇ? ದೇಶದ ಮತದಾರರನ್ನು ಅವಮಾನಿಸುವುದು ಅದರ ಉದ್ದೇಶವಾಗಿತ್ತೇ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ಮಂಗಳವಾರ ಇಲ್ಲಿ ಪ್ರಶ್ನಿಸಿದರು.

ಶುಜಾರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಅವರು,ಕಳೆದ ನಾಲ್ಕೂವರೆ ವರ್ಷಗಳಿಂದಲೂ ತಾನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವನಾಗಿದ್ದೇನೆ. ಈ ವ್ಯಕ್ತಿಯ ಹೆಸರನ್ನು ಎಂದಿಗೂ ಕೇಳಿಲ್ಲ. ಈ ವ್ಯಕ್ತಿ ಅಮೆರಿಕದಿಂದ ಬಂದಿದ್ದು,ಮುಖವನ್ನು ಮುಚ್ಚಿಕೊಂಡಿದ್ದರು. ಈ ನಾಟಕವೇನೆಂದು ಅರ್ಥವಾಗುತ್ತಿಲ್ಲ ಎಂದರು.

2014ರಲ್ಲಿ ಇವಿಎಂಗಳಿಗೆ ಕನ್ನ ಹಾಕಿದ್ದು ಗೊತ್ತಿದ್ದರಿಂದಲೇ ಮುಂಢೆ ಅವರನ್ನು ಹತ್ಯೆ ಮಾಡಲಾಗಿತ್ತು ಎಂಬ ಶುಜಾ ಆರೋಪ ಕುರಿತಂತೆ ಪ್ರಸಾದ್,ಇದಕ್ಕೆ ಉತ್ತರಿಸಲು ಮುಂಢೆಯವರು ಇಲ್ಲಿಲ್ಲ. ಅವರು ದಿಲ್ಲಿಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ್ದ ಏಮ್ಸ್ ವೈದ್ಯರೂ ಅಪಘಾತದಲ್ಲಿ ಕುತ್ತಿಗೆಗೆ ಆಗಿದ್ದ ಗಾಯದಿಂದ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಿದ್ದಾರೆ. ಇದನ್ನು ಕೊಲೆಯೆಂದು ಕರೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಎಲ್ಲ ಚುನಾವಣೆಗಳಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು,ಆದರೆ ಇತ್ತೀಚಿಗೆ ಬಿಜೆಪಿ ಸೋಲನ್ನನುಭವಿಸಿದ್ದ ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಗಡ ಚುನಾವಣೆಗಳಲ್ಲಿ ಈ ಕೆಲಸ ನಡೆದಿರಲಿಲ್ಲ ಎನ್ನುವುದು ಇನ್ನೊಂದು ಅರ್ಥಹೀನ ಹೇಳಿಕೆಯಾಗಿದೆ ಎಂದರು.

ಶುಜಾ ತನ್ನ ಆರೋಪಗಳಿಗೆ ಯಾವುದೇ ಪುರಾವೆ ಒದಗಿಸಿಲ್ಲ, ಪ್ರಶ್ನೆಗಳನ್ನು ಎದುರಿಸಲೂ ಅವರು ಸಿದ್ಧರಿರಲಿಲ್ಲ. ಸಿಬಲ್ ಆ ಸುದ್ದಿಗೋಷ್ಠಿಯಲ್ಲೇನು ಮಾಡುತ್ತಿದ್ದರು ಎನ್ನುವುದನ್ನು ತಿಳಿಯಲು ಬಿಜೆಪಿ ಬಯಸಿದೆ ಎಂದ ಅವರು,ಕಾಂಗ್ರೆಸ್ ಪರವಾಗಿ ಕಾರ್ಯಕ್ರಮದ ಉಸ್ತುವಾರಿಗಾಗಿ ಸಿಬಲ್ ಲಂಡನ್ನಿಗೆ ತೆರಳಿದ್ದರು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News